ಆನೇಕಲ್ (ಬೆಂಗಳೂರು ಗ್ರಾಮೀಣ): ಬೆಂಗಳೂರು ರಾಜಧಾನಿ ಬೆಳೆದಂತೆ ಹಿಂದೆ ರಾಗಿ ನಾಡು ಎಂದು ಖ್ಯಾತಿ ಗಳಿಸಿದ್ದ ಆನೇಕಲ್ ಭಾಗದಲ್ಲಿ ಕಾಂಕ್ರೀಟ್ ಕಾಡು ಹೆಚ್ಚುತ್ತಿರುವ ಹೊತ್ತಿನಲ್ಲೇ ರಾಗಿ ಮುದ್ದೆಯೇ ಅಪರೂಪವಾಗುತ್ತಿದೆ. ಮುಂದೊಂದು ದಿನ ರಾಗಿ ಮುದ್ದೆ ಮಾಯವಾಗುವ ಹಂತಕ್ಕೆ ಬಂದು ತಲುಪಬಹುದು. ಇಂತಹ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಸೊಗಡಿನ ನಾಟಿ ಶೈಲಿಯಲ್ಲಿ, ಬೆಂಗಳೂರು - ಸರ್ಜಾಪುರದ ಮಂಥರ ಹೊಟೇಲ್ ಮಾಲೀಕ ಮಹೇಶ್ ಅವರು ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು.
ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ 32 ಸ್ಪರ್ಧಾಳುಗಳು ಭಾಗಿ:ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ರಾಜ್ಯದ ಕುಣಿಗಲ್, ಮಂಡ್ಯ, ಮಾಲೂರು ಸೇರಿದಂತೆ ಬೆಂಗಳೂರಿನ ಹಲವೆಡೆಗಳಿಂದ 32 ಸ್ಪರ್ಧಾಳುಗಳು ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅತಿ ಹೆಚು ಮುದ್ದೆ ತಿಂದು ಬೀಗಿದವರಿಗೆ ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಬಹುಮಾನ ಎರಡು ಕೋಳಿ ಹಾಗೂ ಮೂರನೇ ಬಹುಮಾನ ಪಡೆದವರಿಗೆ ಒಂದು ನಾಟಿ ಕೋಳಿ ಘೋಷಣೆ ಮಾಡಲಾಗಿತ್ತು.
ಸ್ಪರ್ಧಾರ್ಥಿಗಳಿಗೆ 200 ರೂಪಾಯಿ ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿತ್ತು. ಸ್ಪರ್ಧಾಳುಗಳಿಗೆ ಆರಂಭದಲ್ಲಿ ತಲಾ 250 ಗ್ರಾಂ ತೂಕದ 2 ಮುದ್ದೆಗಳನ್ನು ತಿನ್ನಲು ಕೊಡಲಾಗಿತ್ತು. ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಗುತ್ತಿತ್ತು. ಸ್ಪರ್ಧೆಗೆ 30 ನಿಮಿಷದ ವರೆಗೆ ಟೈಂ ನಿಗದಿಪಡಿಸಲಾಗಿತ್ತು. ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ಹೆಸರನ್ನು ಸ್ಪರ್ಧೆಯಲ್ಲಿ ಅನೌನ್ಸ್ ಮಾಡಲಾಗುತ್ತಿತ್ತು. ಇದರಿಂದ ಒಬ್ಬರಿಗೊಬ್ಬರು ನಾ ಹೆಚ್ಚು ಅನ್ನುವ ಭರದಲ್ಲಿ ಮುದ್ದೆಗಳನ್ನು ತಿನ್ನಲು ಶುರು ಮಾಡಿದರು. ಆದರೆ, ಸ್ಪರ್ಧಾರ್ಥಿಗಳು ಹೊಟ್ಟೆ ಬಿರಿಯವಂತೆ ನಾಟಿ ಕೋಳಿ ಸಾರು ಮುದ್ದೆ ಸವಿದರು.