ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಸೆಪ್ಟೆಂಬರ್ 3 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಮುತ್ಸಂದ್ರ ವಾರ್ಡ್ -3 ರ ಸದಸ್ಯ ಸ್ಥಾನವನ್ನು 35 ಲಕ್ಷಕ್ಕೆ ಹರಾಜು ಇಡಲಾಗಿದೆ. ಆದ್ರೆ ಚುನಾವಣೆ ನಡೆಸುವಂತೆ ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಮುತ್ಸಂದ್ರ ವಾರ್ಡ್ -3 ರಲ್ಲಿ ನಗರಸಭೆ ಚುನಾವಣೆ ಕಾವು ಏರುತ್ತಿದೆ. ಕಣದಲ್ಲಿ ಕಾಂಗ್ರೆಸ್ನಿಂದ ದೀಪಾ ಕೃಷ್ಣಮೂರ್ತಿ, ಬಿಜೆಪಿಯಿಂದ ಸುಮಿತ್ರಾ ಆನಂದ್, ಪಕ್ಷೇತರಾಗಿ ವಿ.ಆರ್ . ಶೋಭಾ ಶಶಿಧರ್ ಕಣದಲ್ಲಿದ್ದಾರೆ. ಆದರೆ, ವಾರ್ಡ್ ನಲ್ಲಿರುವ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸ್ಪರ್ಧೆಯಲ್ಲಿರುವ ಯಾರು ಅತಿ ಹೆಚ್ಚು ಹಣವನ್ನು ಕೊಡುತ್ತಾರೋ ಅವರನ್ನು ವಾರ್ಡ್ ಸದಸ್ಯರನ್ನಾಗಿ ಆಯ್ಕೆ ಮಾಡುವ ತೀರ್ಮಾನವನ್ನು ವಾರ್ಡ್ ನ ಕೆಲವು ಮುಖಂಡರು ಮಾಡಿದ್ದಾರೆ. ಅದರಂತೆ ಒಬ್ಬ ಅಭ್ಯರ್ಥಿ ದೇವಸ್ಥಾನಕ್ಕೆ 35 ಲಕ್ಷ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಅದರಂತೆ ಮುಂಗಡವಾಗಿ 20 ಲಕ್ಷ ರೂ. ಮತ್ತು ಚುನಾವಣೆಯ ನಂತರ ಉಳಿದ ಹಣ ಕೊಡುವುದಾಗಿ ತಿಳಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಸ್ಥಾನ 35 ಲಕ್ಷ ರೂ. ಗೆ ಹರಾಜು! ಸ್ಪರ್ಧೆಯಲ್ಲಿದ್ದ ಉಳಿದ ಇಬ್ಬರು ನಾಮಪತ್ರ ಹಿಂದೆಗೆದುಕೊಳ್ಳಲು ಮುಂದಾಗಿದ್ದಾರೆ. ಚುನಾವಣೆ ನಡಸದೆ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತಿರುವುದು ವಾರ್ಡ್ ಯುವಕರ ಅಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಚುನಾವಣೆಯಿಂದ ಹಿಂದೆ ಸರಿಯದಂತೆ ಕಾಂಗ್ರೆಸ್ ಅಭ್ಯರ್ಥಿ ದೀಪಾ ಕೃಷ್ಣಮೂರ್ತಿ ಮನೆ ಮುಂದೆ ಯುವಕರು ಪ್ರತಿಭಟನೆ ನಡೆಸಿದ್ದಾರೆ. 8 ವರ್ಷಗಳಿಂದ ದೇವಸ್ಥಾನದ ಕಾಮಗಾರಿ ನಡೆಯದೆ ಆಗೆಯೇ ಬಿದ್ದಿದೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಕೊಡುವ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ಸರಿಯಲ್ಲ, ಜೀರ್ಣೋದ್ಧಾರಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸೋಣ ಎಂಬುದು ಯುವಕರ ವಾದವಾಗಿದೆ.
ಘಟನೆ ಸಂಬಂಧ ಚುನಾವಣೆಯ ವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸದಸ್ಯ ಸ್ಥಾನವನ್ನ ಹರಾಜು ಇಡುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸ್ವಇಚ್ಛೆಯಿಂದ ನಾಮಪತ್ರ ಹಿಂದೆತೆಗೆದುಕೊಳ್ಳಬಹುದು ಎಂದು ಕೂಡ ತಿಳಿಸಿದ್ದಾರೆ.