ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಕೊಳವೆ ಬಾವಿಗಳಿದ್ದರೂ ನೀರು ಬಿಡುತ್ತಿಲ್ಲ ಎಂದು ಸಾರ್ವಜನಿಕರು ಪುರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಪುರಸಭೆಯ ವ್ಯಾಪ್ತಿಯಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ನೀರಿಗಾಗಿ ಅಲೆದಾಡುವಂತಾಗಿದೆ ಎಂದು ದೂರಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ಸಾಕಷ್ಟು ತೊಂದರೆ ಇದೆ. ಕೆಲವೊಂದು ವಾರ್ಡ್ಗಳಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಮತ್ತು ಇನ್ನು ಕೆಲವು ವಾರ್ಡ್ಗಳಿಗೆ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ನೀರಿನ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಅದರೆ, ಇಲ್ಲಿರುವ ಪರಿಸ್ಥಿತಿ ಬೇರೆಯೇ ಇದೆ.
ಕೊಳವೆ ಬಾವಿಗಳ ಜತೆಗೆ ಒಂದು ಸಂಪು ಕೂಡಾ ನಿರ್ಮಿಸಲಾಗಿದೆ. ಆ ಕೊಳವೆ ಬಾವಿಗಳಿಂದ ಎರಡು ಮೂರು ತಿಂಗಳ ಹಿಂದೆಯೇ ಸಂಪ್ಗೆ ಬಿಟ್ಟಿರುವ ನೀರನ್ನು ಜನರಿಗೆ ಪೂರೈಸಲು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೇಖರಿಸಿರುವ ಒಂದು ಲಕ್ಷ ಲೀಟರ್ ನೀರು, ಈಗ ಬಳಕೆಗೆ ಯೋಗ್ಯವಾಗಿಲ್ಲ. ನೀರಿನಲ್ಲಿ ಕಸ ಕಡ್ಡಿ ತುಂಬಿದೆ. ಅಷ್ಟೇ ಅಲ್ಲದೆ, ಸಂಪ್ ಸುತ್ತಮುತ್ತ ಕಸದ ರಾಶಿಯೇ ಬಿದ್ದಿದೆ. ಪುರಸಭೆ ಅಧಿಕಾರಿಗಳು ನೀರಿನ ವಿಷಯದಲ್ಲಿ ತುಂಬಾ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೆ, ಇರುವ ನೀರನ್ನೇ ಜನರಿಗೆ ಪೂರೈಸದೇ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೇ ಇಲ್ಲ. ಅಲ್ಲಿ ಕೊಳವೆ ಬಾವಿ ಕೊರೆಸಿರುವುದು ಮತ್ತು ಸಂಪ್ ನಿರ್ಮಿಸಿರುವುದು ನಿಜ. ಇನ್ನೆರಡು ದಿನಗಳಲ್ಲಿ ಸಂಪ್ ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುವುದು. ಜನರಿಗೆ ತೊಂದರೆಯಾಗಂತೆ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.