ದೇವನಹಳ್ಳಿ: ಸಚಿವ ಸ್ಥಾನ ಸಿಗದ ಹಿನ್ನೆಲೆ ಎಂ.ಪಿ.ರೇಣುಕಾಚಾರ್ಯ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ದೆಹಲಿಗೆ ಪ್ರಯಾಣ ಬೆಳೆಸಿದ ಅವರು ನಾನೇನು ರೆಡಿಮೇಡ್ ಎಂಟಿಆರ್ ಫುಡ್ಸ್ ಅಲ್ಲ, ಹೋರಾಟದ ಮೂಲಕ ಶಾಸಕನಾದವನೆಂದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಪಕ್ಷದ ವಿರುದ್ಧ ಎಷ್ಟೇ ಮಾತನಾಡಿದ್ರು ಪಕ್ಷ ತಾಯಿ ಹೃದಯವಿದ್ದಂತೆ. ನಾನು ಎಷ್ಟೇ ತಪ್ಪು ಮಾಡಿದ್ರು ಪಕ್ಷ ಆತ್ಮವಲೋಕನ ಮಾಡಿಕೊಳ್ಳತ್ತದೆ. ವಿಧಾನ ಪರಿಷತ್ನ ಇತಿಹಾಸದಲ್ಲೇ 5 ಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ನಾವು 105 ಸದಸ್ಯರು ಇದ್ದಿದ್ದರಿಂದ ಎಂಟಿಬಿ ಮತ್ತು ಆರ್. ಶಂಕರ್ ಸರ್ಕಾರ ರಚನೆಯಾಗಿ ರಾಜೀನಾಮೆ ನೀಡಿದ್ರು. ಆದರೆ ಸರ್ಕಾರ ರಚನೆಗೆ ಯೋಗೇಶ್ವರ್ ಕೊಡುಗೆ ಇದೆ ಅಂತಾರೆ, ಅವರ ಕೊಡುಗೆ ಏನಿದೆ? ಎಂದು ಯೋಗೇಶ್ವರವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಅಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಬಂದವರು ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ನಾಯಕತ್ವ ನೋಡಿ ಬಿಜೆಪಿಗೆ ಬಂದಿದ್ದಾರೆಯೇ ಹೊರತು ಯೋಗೇಶ್ವರ್ ಮುಖ ನೋಡಿಕೊಂಡು ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕೆಲಸದ ನಿಮಿತ್ತ ದೆಹಲಿಗೆ ಪ್ರಯಾಣ ಬೆಳೆಸಿದ್ದೇನೆ. ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಅದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿತಿನ್ ಗಡ್ಕರಿ ಭೇಟಿ ಮಾಡಲು ದೆಹಲಿಗೆ ತೆರಳಿದ್ದೇನೆ. ಯಾರ ಭೇಟಿಗೂ ಸಮಯ ಕೇಳಿಲ್ಲ, ವರಿಷ್ಠರು ಸಿಕ್ಕರೆ ಮಾತನಾಡುತ್ತೆನೆ. ಯಡಿಯೂರಪ್ಪ ಮತ್ತು ಪಕ್ಷ ಸಂಘಟನೆ ನನ್ನ ಎರಡು ಕಣ್ಣುಗಳಿದ್ದಂತೆ, ಯಡಿಯೂರಪ್ಪನವರು ನಮ್ಮನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದರು.
ದೆಹಲಿಗೆ ಪ್ರಯಾಣ ಬೆಳೆಸಿದ ಎಂ.ಪಿ.ರೇಣುಕಾಚಾರ್ಯ ದಾವಣಗೆರೆ ಜಿಲ್ಲೆಯು ಶಿಕ್ಷಣ ಕ್ಷೇತ್ರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಹೊಂದಿದೆ. ನಮ್ಮ ಜಿಲ್ಲೆಯ ನಾಯಕರಿಗೆ ಸಹ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೆವು. ಉತ್ತರ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿದೆ. ಮಧ್ಯ ಕರ್ನಾಟಕಕ್ಕೆ ಅವಕಾಶವೇ ಸಿಕ್ಕಿಲ್ಲ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಬೆಂಗಳೂರಿನಲ್ಲಿ ಕೆಲವರನ್ನು ಬಿಟ್ಟು ಗೆದ್ದವರನ್ನು ಮಂತ್ರಿ ಮಾಡಿದ್ದಾರೆ. ಕೆಲವು ಕ್ಷೇತ್ರಗಳಿಗೆ ಸಚಿವ ಸ್ಥಾನ ಕೊಡದೇ ಇರುವ ನೋವು ನನಗಿದೆ. ಸಚಿವ ಸ್ಥಾನ ಕೇವಲ ಬೆಂಗಳೂರು ಮತ್ತು ಬೆಳಗಾವಿಗೆ ಸೀಮಿತವಾಗಿದೆ, ನನ್ನ ಕ್ಷೇತ್ರದ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ನನಗೆ ನೋವಿದೆ, ಮನಸ್ಸಿಗೆ ನೋವಾಗಿದೆ ಎಂದರು.
ನಾನು ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟದ ಮೂಲಕ ಶಾಸಕನಾದವನು. ಹಿಂದುತ್ವ ಹೋರಾಟಕ್ಕಾಗಿ ಬೆಳಗಾವಿ ಮತ್ತು ಬಳ್ಳಾರಿ ಜೈಲಿಗೆ ಹೋಗಿದ್ದೇನೆ. ನಾನೇನು ರೆಡಿಮೇಡ್ ಎಂಟಿಆರ್ ಫುಡ್ಸ್ ಅಲ್ಲ, ನನಗೆ ಸ್ವಲ್ಪ ಅನ್ಯಾಯವಾಗಿದ್ದು, ಸಹಜವಾಗಿ ನೋವಾಗಿದೆ ಎಂದರು.