ದೊಡ್ಡಬಳ್ಳಾಪುರ: ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿರುವ ಬಗ್ಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. 'ಚುನಾವಣೆಯ ಸಮಯದಲ್ಲಿ ರಾಜಕೀಯವಾಗಿ ಬಲಿಷ್ಠರಾಗಿರುವ ನಾಯಕರ ಆತ್ಮಸ್ಥೈರ್ಯ ಕುಗ್ಗಿಸುವ ಸಲುವಾಗಿ ಇಂತಹ ದಾಳಿ ನಡೆಯುತ್ತಿದೆ' ಎಂದು ಅವರು ದೂರಿದರು.
ಐಟಿ ದಾಳಿ - ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಶಮನಕ್ಕಾಗಿ ಭೇಟಿ ನೀಡಿದ ಡಿ.ಕೆ.ಸುರೇಶ್, ಸ್ಥಳೀಯ ನಾಯಕರುಗಳ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಇಡಿ, ಐಟಿ ದಾಳಿ ಮಾಡಿಸುತ್ತಿದೆ. ತಪ್ಪು ಮಾಡದಿದ್ದಾಗ ಹೆದರುವ ಪ್ರಶ್ನೆಯೇ ಇಲ್ಲ. ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಯಾವುದೇ ರೀತಿಯ ಪ್ರಕರಣಗಳನ್ನು ಎದುರಿಸಲು ಸಿದ್ದ ಎಂದರು.
ಮಕ್ಕಳು ಮೇಲೆ ರಾಜಕೀಯ ಅಂಜೆಡಾ:ರಾಜ್ಯ ಸರ್ಕಾರ ವಿವೇಕ ಯೋಜನೆಯ ಹೆಸರಿನಲ್ಲಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಶಾಲೆಗಳಲ್ಲಿ ಕೇಸರಿ ಬಣ್ಣ ಯಾಕೆ ಬಳಿಯುತ್ತಿದ್ದಾರೋ ಗೊತ್ತಿಲ್ಲ. ಹೆಚ್ಚಾದ ಮಳೆ ಮತ್ತು ಕೊರೊನಾದಿಂದ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿಗಳ ದುರಸ್ತಿಗಾಗಿ ಪ್ರತಿ ಜಿಲ್ಲೆಗೆ 50 ಕೋಟಿ ರೂ ಹಣ ಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ವರದಿ ನೀಡಿದ್ದಾರೆ.
ಆದರೆ, ಇವರಿಗೆ ದುರಸ್ತಿಗೆ ಹಣ ಕೊಡಲು ಸಾಧ್ಯವಾಗಿಲ್ಲ. ಪಠ್ಯ ಪುಸ್ತಕ ಬದಲಾವಣೆಯಲ್ಲೇ ಸಮಯ ಕಳೆದರು. ಶಿಕ್ಷಕರ ಕೊರತೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೇ?, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಂಜೆಡಾವನ್ನು ಮಕ್ಕಳ ಮೇಲೆ ಹೇರುವುದು ಅಸಹ್ಯ ಎಂದರು.
ಇದನ್ನೂ ಓದಿ:ಡಿಕೆಶಿ, ಸಹೋದರ ಡಿಕೆ ಸುರೇಶ್ಗೆ ಇಡಿಯಿಂದ ಮತ್ತೆ ಸಮನ್ಸ್ ಜಾರಿ