ಕರ್ನಾಟಕ

karnataka

ETV Bharat / state

'ಮೋದಿ ಆಧುನಿಕ ಔರಂಗಜೇಬ್': ಪರಿಷತ್‌ ಕಾಂಗ್ರೆಸ್‌ ಸದಸ್ಯ ಎಸ್. ರವಿ ಹೇಳಿಕೆ - ಈಟಿವಿ ಭಾರತ್ ಕನ್ನಡ ಸುದ್ದಿ

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ದೇವನಹಳ್ಳಿಯ ಡಿಸಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಎಂಎಲ್​ಸಿ ಎಸ್ ರವಿ
ಎಂಎಲ್​ಸಿ ಎಸ್ ರವಿ

By

Published : Jun 20, 2023, 9:36 PM IST

ಎಂಎಲ್​ಸಿ ಎಸ್ .ರವಿ ಹೇಳಿಕೆ

ದೇವನಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಆಧುನಿಕ ಔರಂಗಜೇಬ್ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ತಾಲಿಬಾನ್ ಆಡಳಿತ ಇರುವ ಅಘ್ಘಾನಿಸ್ತಾನಕ್ಕೆ ಅಕ್ಕಿ ಕೊಡ್ತಾರೆ. ಆದರೆ ಕರ್ನಾಟಕಕ್ಕೆ ಕೊಡುತ್ತಿಲ್ಲ. ಅಧಿಕಾರದ ದಾಹಕ್ಕೆ ಔರಂಗಜೇಬ್ ದೆಹಲಿಯಿಂದ ದಕ್ಷಿಣ ಭಾರತವನ್ನು ಕ್ರೂರವಾಗಿ ಆಕ್ರಮಣ ಮಾಡಿದಂತೆ ಮೋದಿ ಸಹ ಕರ್ನಾಟಕವನ್ನು ಗೆಲ್ಲುವ ಕಾರಣಕ್ಕೆ ಆಕ್ರಮಣ ಮಾಡುತ್ತಿದ್ದಾರೆ ಎಂದು ಕಟು ಟೀಕೆ ಮಾಡಿದರು.

ಕರ್ನಾಟಕವನ್ನು ಗೆಲ್ಲಲು ಬಂದ ಮೋದಿಯವರನ್ನು ಕರ್ನಾಟಕ ಜನತೆ ಗೆಲ್ಲಿಸದಿರುವುದು ಅವರ ಆಕ್ರೋಶಕ್ಕೆ ಕಾರಣ. ಇದೇ ಕಾರಣಕ್ಕೆ ರಾಜ್ಯಕ್ಕೆ ಅಕ್ಕಿ ಕೊಡದೇ ದ್ರೋಹ ಮಾಡುತ್ತಿದ್ದಾರೆ. ಅವರ ದ್ವಿಮುಖ ನೀತಿಯನ್ನು ಮತ್ತು ಕನ್ನಡ ವಿರೋಧಿ ನಡವಳಿಕೆಯನ್ನು ಜನತೆಯ ಮುಂದಿಡುವ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ.

ಬಿಜೆಪಿಯ 25 ಸಂಸದರು ಇದ್ದಾರೆ. ಅವರು ನಾಮಾರ್ಧರಾ ಅಥವಾ ಸಂಸದರಾ ಎಂದು ಕೇಳಬೇಕಿದೆ. ರಾಜ್ಯದ ಅಕ್ಕಿ ಬೇಡಿಕೆಗೆ ಬಿಜೆಪಿ ಸಂಸದರು ಕೈಜೋಡಿಸಬೇಕಿತ್ತು. ಆದರೆ ಸುಮ್ಮನಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ರಾಜ್ಯದ ಜನರು ಹೊಡೆದೊಡಿಸುತ್ತಾರೆಂದು ತೀವ್ರ ವಾಗ್ಧಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ರಾಜ್ಯಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬೀರಸಂದ್ರ ಜಿಲ್ಲಾಡಳಿತ ಭವನದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ವೆಂಕಟರಮಣಯ್ಯ ಹಾಗೂ ಎಂಎಲ್​ಸಿ ರವಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನಕ್ಕೆ ಕೇಂದ್ರ ಅಡ್ಡಗಾಲು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕೇಂದ್ರದ ಬಳಿ ಸಾಕಷ್ಟು ಅಕ್ಕಿಯಿದ್ದು, ಅವೆಲ್ಲ ಗೋದಾಮುಗಳಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಖರೀದಿ ಮಾಡಲು ಬಿಡದೇ ಜನರಿಗೆ ದ್ರೋಹ ಬಗೆಯಲು ಮುಂದಾಗಿದೆ ಎಂದು ಶಾಸಕರು ಹರಿಹಾಯ್ದರು.

ಇದನ್ನೂ ಓದಿ:Congress protest: ಅನ್ನಭಾಗ್ಯದ ಅಕ್ಕಿ ವಿವಾದ.. ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್

ABOUT THE AUTHOR

...view details