ನೆಲಮಂಗಲ:ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿದ ನೆಲಮಂಗಲದ 31 ವಾರ್ಡ್ಗಳಿಗೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕ ಡಾ. ಶ್ರೀನಿವಾಸಮೂರ್ತಿ ಅವರ ವಿರುದ್ಧ ಸ್ವಪಕ್ಷದವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೆ ಏರಿಸುವ ಮುನ್ನ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 13, ಕಾಂಗ್ರೆಸ್ 7, ಬಿಜೆಪಿ 2, ಪಕ್ಷೇತರ 1 ವಾರ್ಡ್ನಲ್ಲಿ ಜಯ ಗಳಿಸಿತ್ತು. ಸ್ಪಷ್ಟ ಬಹುಮತ ಪಡೆದಿದ್ದ ಜೆಡಿಎಸ್, ಅಧಿಕಾರ ಹಿಡಿಯುವ ಕನಸು ಕಂಡಿತ್ತು. ಈ ನಡುವೆ ಪುರಸಭೆಯ ಅಕ್ಕಪಕ್ಕದ ಅರಿಶಿನಕುಂಟೆ, ವಾಜರಹಳ್ಳಿ, ಬಸವನಹಳ್ಳಿ, ವಿಶ್ವೇಶ್ವರಪುರ ಗ್ರಾಪಂಗಳನ್ನು ಸೇರಿಸಿಕೊಂಡು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಹೀಗಾಗಿ ಅಧಿಕಾರ ಕೈ ಚೆಲ್ಲಿದೆ.
ನಗರಸಭೆಗೆ ವಿಲೀನಗೊಂಡ ಪಂಚಾಯಿತಿ ಮತ್ತು ಪುರಸಭೆ ಸದಸ್ಯರು ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು. ನವೆಂಬರ್ 10ರಂದು ವಿಚಾರಣೆ ನಡೆಸಿದ ನ್ಯಾಯಪೀಠ, ಹಾಲಿ 23 ವಾರ್ಡ್ಗಳನ್ನು ಹೊರತುಪಡಿಸಿ ನಗರಸಭೆಗೆ ವಿಲೀನಗೊಂಡಿರುವ ಗ್ರಾಪಂ ಪ್ರತಿನಿಧಿಸುವ ನಾಮ ನಿರ್ದೇಶಿತರು, ಅವರ ಹಕ್ಕುಗಳು ಸೇರಿ ಮೇಲ್ದರ್ಜೆಗೇರಿರುವ ಸದಸ್ಯರ ಅಧಿಕಾರಾವಧಿ ಕುರಿತು ಸ್ಪಷ್ಟನೆ ಕೋರಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕ ಡಾ. ಶ್ರೀನಿವಾಸಮೂರ್ತಿ ಯಡಿಯೂರಪ್ಪಗೆ ಪತ್ರ ಬರೆದು 31 ವಾರ್ಡ್ಗಳಿಗೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಪುರಸಭೆಗೆ ಚುನಾಯಿತರಾದವರನ್ನು ನಗರಸಭೆಗೆ ಮೇಲ್ದರ್ಜೆಗೆ ಏರಿಸಿರುವುದರಿಂದ ಅಕ್ಕಪಕ್ಕದ ನಾಲ್ಕು ಗ್ರಾಪಂಗಳು ಕಡೆಗಣನೆಯಾಗಲಿವೆ. ನಾಲ್ಕು ಪಂಚಾಯಿತಿಗಳಿಂದ ನಾಲ್ವರು ನಾಮ ನಿರ್ದೇಶಿತರ ಆಯ್ಕೆಗೆ ಮುಂದಾಗಿರುವ ಕಾರಣ ಉಳಿದವರಿಗೆ ಅನ್ಯಾಯವಾಗಲಿದೆ. ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಬಿಟ್ಟಿದ್ದು ಸರಿಯಿಲ್ಲ ಎಂಬ ದೂರು ಕೇಳಿ ಬಂದಿದೆ.
ಸರ್ವರಿಗೂ ಸಮಬಾಳು ಮತ್ತು ಸಮಪಾಲು ನಿಟ್ಟಿನಲ್ಲಿ ಪತ್ರ ಬರೆದಿದ್ದೇನೆ. ಇದರಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ನಗರಸಭೆ ಸದಸ್ಯರೆಲ್ಲಾ ರಾಜೀನಾಮೆ ನೀಡುವುದಾದರೆ ನೀಡಲಿ. ಇದರಿಂದ ಮತ್ತೆ ಚುನಾವಣೆ ಆಗಲಿದೆ ಎಂದರು. ನಗರಸಭೆ ಅಧಿಕಾರದ ಚುಕ್ಕಾಣಿಯನ್ನ ಜೆಡಿಎಸ್ ಬಹಳ ಸುಲಭವಾಗಿ ಹಿಡಿಯುತ್ತಿತ್ತು. ಆದರೆ ತಮ್ಮದೇ ಪಕ್ಷದ ಶಾಸಕರು ಪತ್ರ ಬರೆದಿರುವುದು ಜೆಡಿಎಸ್ ಮುಖಂಡರ ಅಕ್ರೋಶಕ್ಕೆ ಕಾರಣವಾಗಿದೆ. ಜೆಡಿಎಸ್ನ 13 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ.