ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿವೆ.
ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಟಿ. ವೆಂಕಟರಮಣಯ್ಯ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯೋದು ಪಕ್ಕಾ, ಕ್ಲೈಮ್ಯಾಕ್ಸ್‌ನಲ್ಲಿ ನಮ್ಮದೇ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 3 ರಂದು ನಡೆದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತ ಸಿಗದೆ ಅತಂತ್ರವಾಗಿದೆ. 31 ವಾರ್ಡ್ಗಳಲ್ಲಿ 12 ಬಿಜೆಪಿ, 09 ಕಾಂಗ್ರೆಸ್, 07 ಜೆಡಿಎಸ್ ಮತ್ತು 03 ಸ್ಥಾನಗಳು ಪಕ್ಷೇತರರ ಪಾಲಾಗಿದೆ. ಅಧಿಕಾರ ಹಿಡಿಯಲು 16 ಸ್ಥಾನಗಳ ಅಗತ್ಯವಿದೆ. ಆದರೆ, ಯಾವುದೇ ಪಕ್ಷ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಅತಂತ್ರ ಪರಿಸ್ಥಿತಿ ಇದೆ. ಜೆಡಿಎಸ್ ಪಕ್ಷ ನಿರ್ಣಯಕ ಸ್ಥಾನದಲ್ಲಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತೆರೆಮರೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಗೆ ಪೈಪೋಟಿ ನಡೆಸಿವೆ.