ದೊಡ್ಡಬಳ್ಳಾಪುರ : ದಲಿತರ ಭೂಮಿಯನ್ನು ಮೇಲ್ವರ್ಗದವರು ಕಬಳಿಸುವ ಪ್ರಯತ್ನಗಳು ತಾಲ್ಲೂಕಿನಲ್ಲಿ ನಡೆಯುತ್ತಿದ್ದು, ದಲಿತರಿಗೆ ರಕ್ಷಣೆ ನೀಡಬೇಕಾದ ಶಾಸಕರೊಬ್ಬರು ಭೂಗಳ್ಳರಿಗೆ ಬೆಂಬಲವಾಗಿ ನಿಂತ್ತಿದ್ದಾರೆಂದು ದಲಿತ ದಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ ಆರೋಪಿಸಿದ್ದಾರೆ.
ದಲಿತರ ಭೂಮಿ ದೋಚುವವರ ಪರ ನಿಂತರಾ ಶಾಸಕರು ..? ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ತಿಮ್ಮಸಂದ್ರ ಗ್ರಾಮದ ಸ.ನಂ 166 ರಲ್ಲಿ ನಾಗಪ್ಪ ಮತ್ತು ಸಂಜೀವಪ್ಪ ಅವರಿಗೆ ಕ್ರಮವಾಗಿ 1-10 ಗುಂಟೆ ಮತ್ತು 2-28 ಗುಂಟೆ 1978-79 ರಲ್ಲಿ ಆರ್.ಆರ್.ಟಿಯಲ್ಲಿ ಮಂಜೂರಿಯಾಗಿದ್ದು, ಆಂದಿನಿಂದ ಅವರ ಸ್ವಾಧೀನದಲ್ಲಿದೆ. ಈ ಜಮೀನು ಹೊಡೆಯಲು ಪ್ರಬಲ ಸಮುದಾಯ ಪ್ರಯತ್ನಿಸಿದೆ. ಸ್ವಜಾತಿ ಪರವಾಗಿ ನಿಂತ ಶಾಸಕರು ದಲಿತ ಭೂಮಿ ದೋಚುವರ ಪರವಾಗಿ ಅಧಿಕಾರಿಗಳಿಗೆ ಆಜ್ಞೆ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.
ತಾಲ್ಲೂಕು ಛಲವಾದಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಅವರು ಮಾತನಾಡಿ, 1978-79 ರಲ್ಲಿ ದಲಿತರಿಗೆ ಮಂಜೂರಿಯಗಿರುವ ಭೂಮಿಗೆ ಕೆಲವು ಮೇಲ್ವರ್ಗದ ಜನ ಸ್ವಾಧೀನತೆಗೆ ಅಡ್ಡಿಪಡಿಸುತ್ತಿದ್ದಾರೆ. ದಲಿತರಿಗೆ ಕಾನೂನು ಬದ್ಧವಾಗಿ ರಕ್ಷಣೆ ನೀಡುವಂತೆ ತಾಲ್ಲೂಕು ತಹಸೀಲ್ದಾರ್ರವರು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಈ ಮಧ್ಯೆ ಕೆಲವು ಜನಪ್ರತಿನಿಧಿಗಳು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ರಕ್ಷಣೆ ನೀಡಬೇಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ . 2004ರಲ್ಲಿ RRT ಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದಲಿತರ ಪರವಾಗಿ ಆದೇಶವಾಗಿದೆ. ಆದರೆ ಅದು ನಕಲಿ ಎಂದು ಹೇಳಿ ದಲಿತರ ಜಮೀನು ಹೊಡೆಯುವ ಸಂಚು ನಡೆಸಿದ್ದಾರೆ. ಶಾಸಕರ ಪಕ್ಷಪಾತಿ ಧೋರಣೆ ಮುಂದುವರೆದರೆ ಮುಂದಿನ ದಿನಗಳಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಮೀನು ಮಾಲೀಕ ನಾಗಪ್ಪ ಮಾತನಾಡಿ, ನಾವು ಅಮಾಯಕರಾಗಿದ್ದು ಜಮೀನಿನ ಬಳಿಗೆ ಹೋದರೆ ಕೃಷ್ಣಪ್ಪ, ನಾರಾಯಣಪ್ಪ ಮತ್ತು ಶಾಂತಮ್ಮ ಎಂಬುವವರು ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾರೆ. ನಾವು ನ್ಯಾಯಬದ್ಧವಾಗಿ ನಮ್ಮ ಭೂಮಿಯನ್ನು ಕೇಳುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.