ಹೊಸಕೋಟೆ :ರಾಜ್ಯ ವಿಧಾನಸಭಾ ಚುನಾವಣೆ ರಣಕಣ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಶಾಸಕ ಶರತ್ ಬಚ್ಚೇಗೌಡ ಪತ್ನಿ ಪ್ರತಿಭಾ ಶರತ್ ಇಂದು ಬೆಳಗ್ಗೆ ಪ್ರಚಾರಕ್ಕೆ ಬಂದಿದ್ದರು. ಪ್ರಚಾರಕ್ಕೆ ಬಂದು ಕಾರು ನಿಲ್ಲಿಸಿದ್ದ ವೇಳೆ ಕಾರಿನ ಗ್ಲಾಸ್ಗಳನ್ನು ಒಡೆದು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಶಾಸಕರ ಪತ್ನಿಯ ಕಾರಿನ ಗ್ಲಾಸ್ಗಳನ್ನು ಒಡೆದು ಹಾಕಿ ಅಟ್ಟಹಾಸ ಮೆರೆಯಲಾಗಿದೆ. ಇನೋವಾ ಕ್ರಿಸ್ಟಾ ಕಾರಿನ ಸೈಡ್ ಗ್ಲಾಸ್ಗಳನ್ನು ಒಡೆದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಈ ವಿಚಾರ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕ ಶರತ್ ಬಚ್ಚೇಗೌಡ ಸ್ಥಳಕ್ಕೆ ದೌಡಾಯಿಸಿದ್ರು. ಈ ವೇಳೆ ಪರಿಶೀಲನೆ ಮಾಡಿದ ಶರತ್ ಶಾಂತಿಯುತ ಹೊಸಕೋಟೆಯಲ್ಲಿ ಅಶಾಂತಿ ಉಂಟು ಮಾಡಲು ಕೆಲ ಕಿಡಿಗೇಡಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಹಾಗೂ ಎಎಸ್ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಕಾರು ಗ್ಲಾಸ್ ಒಡೆದಿರೋದನ್ನ ಖಂಡಿಸಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಪತ್ನಿ ಪ್ರತಿಭಾ ನಗರದಲ್ಲಿ ಕಾಲ್ನಡಿಗೆ ಜಾಥ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಈ ವೇಳೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಮಗೆ ತುಂಬಾ ಬೇಸರವಾಗುತ್ತದೆ, ಪ್ರತಿಭಾ ಅವರು ನನ್ನ ಧರ್ಮಪತ್ನಿ, ಅವರ ತಂದೆ ಸಾವಿರಾರು ಕೋಟಿ ರೂ.ಗಳ ಒಡೆಯ. ಈಗ ಅವರ ಮೇಲೆಯೇ ಈಗಾಗಲೇ ಒಂದು ಪಿತೂರಿ ಮಾಡಿ ಐಫ್ಐಆರ್ ದಾಖಲಾತಿ ಮಾಡಬೇಕು ಎಂದು ಕಂಪ್ಲೆಂಟ್ ಕೊಡುತ್ತಾರೆ. ಬೆಳಗ್ಗೆ ಐದು ಗಂಟೆಗೆ ಬಂದು ಪೌರಕಾರ್ಮಿಕರನ್ನು ಗುರುತಿಸಿ ಅವರಿಗೆ ಕೋಟು ಹಾಗೂ ರಗ್ಗುಗಳನ್ನು ಕೊಟ್ಟಿರುವುದು ತಪ್ಪಾ? ಎಂದು ಪ್ರಶ್ನಿಸಿದರು.
ನನ್ನ ಮೇಲೆ ನಾಲ್ಕೈದು ಕೇಸ್ಗಳನ್ನು ಈಗಾಗಲೇ ಹಾಕಲಾಗಿದೆ: ಗಲೀಜಾಗಿದ್ದ, ನೈರ್ಮಲ್ಯ ಇಲ್ಲದಂತಹ ಸ್ಥಳವನ್ನು ಸ್ವಚ್ಛತೆ ಮಾಡಿಬಂದಿದ್ದು ಅವರ ತಪ್ಪಾ?. ಶನಿವಾರ ಭಾನುವಾರ ಎಲ್ಲರೂ ರೆಸಾರ್ಟ್ಗಳಿಗೆ ಹೋದಾಗ ತಾಲೂಕಿನಲ್ಲಿರುವ ಮಕ್ಕಳು ಕೂಡಾ ನನ್ನ ಮಕ್ಕಳು ಎಂದು ಹೇಳಿ ಅಂಗನವಾಡಿಗೆ ಬಂದು ಅಲ್ಲಿ ಕ್ಲೀನ್ ಮಾಡಿ ಅಲ್ಲಿರುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದು ತಪ್ಪಾ?. ಈ ತಪ್ಪಿಗೆ ಬಹುಮಾನ ಏನು? ಐಫ್ಐಆರ್ ಹಾಕಿದ್ದೀರಿ ಅವರ ಮೇಲೆ. ಇದಿಷ್ಟು ಸಾಕಾಗದು ಎಂಬ ಕಾರಣಕ್ಕಾಗಿ ನಗರದ ಭಾಗದಲ್ಲಿ ಪ್ರಚಾರ ಮಾಡಿಕೊಂಡು ಓಡಾಡುತ್ತಿರುವುದರಿಂದ ಅವರಿಗೆ ಭಯ ಹುಟ್ಟಿಸಬೇಕು, ಅವರು ಧೈರ್ಯಗೆಡಬೇಕು ಎಂದು ಹೇಳಿ ಇವತ್ತು ಕಿಟಕಿಯನ್ನು ಒಡೆದುಹಾಕಿ ಬೆದರಿಸುವಂತಹ ಪ್ರಯತ್ನ ನಡೆದಿದೆಯಾ? ನನ್ನ ಮೇಲೆ ನಾಲ್ಕೈದು ಕೇಸ್ಗಳನ್ನು ಈಗಾಗಲೇ ಹಾಕಲಾಗಿದೆ. ನನ್ನ ಮಕ್ಕಳು ಸೇರಿದಂತೆ ನಮ್ಮ ಕುಟುಂಬದ ಎಲ್ಲರ ಮೇಲೂ ಕೇಸ್ ಹಾಕಿಬಿಡಿ ಎಂದು ಶಾಸಕ ಶರತ್ ಬಚ್ಚೇಗೌಡ ಸಿಡಿಮಿಡಿಗೊಂಡರು.
ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಕ ಬಿಡುವುದಿಲ್ಲ: ಯಾವುದೇ ಕಾರಣಕ್ಕೂ ಧೈರ್ಯಗೆಡುವ ವಂಶದಲ್ಲಿ ನಾವು ಹುಟ್ಟಿಲ್ಲ. ಇಟ್ಟ ಹೆಜ್ಜೆ ಮುಂದಿಟ್ಟ ಮೇಲೆ ವಾಪಸ್ ತೆಗೆದುಕೊಳ್ಳುವಂತದ್ದಲ್ಲ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಕ ಬಿಡುವುದಿಲ್ಲ. ನಮ್ಮ ತಾಲೂಕಿನ ಜನ ನಮ್ಮ ಹಿಂದೆ ಇದ್ದೇ ಇರುತ್ತಾರೆ. 2023ರ ಚುನಾವಣೆಯಲ್ಲಿ ಆಶೀರ್ವಾದ ಮಾಡಿಯೇ ಮಾಡುತ್ತಾರೆ ಎಂದು ಶರತ್ ಬಚ್ಚೇಗೌಡ ವಿಸ್ವಾಸ ವ್ಯಕ್ತಪಡಿಸಿದರು.
ನನ್ನ ಪತ್ನಿಯ ಪ್ರಚಾರಕ್ಕೆ ಅಡ್ಡಿಪಡಿಸಲು ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಕೂಡಲೇ ಆರೋಪಿಯನ್ನ ಬಂಧಿಸುವ ವಿಶ್ವಾಸವಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ಒಕ್ಕಲಿಗ ಸಮುದಾಯಕ್ಕೆ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ