ಹೊಸಕೋಟೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಸಚಿವರೊಂದಿಗೆ ಮಾತನಾಡಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಪ್ರತಿದಿನ ಹತ್ತಾರು ಆ್ಯಂಬುಲೆನ್ಸ್ಗಳು ಸರತಿ ಸಾಲಲ್ಲಿ ನಿಂತಿರುತ್ತವೆ. ಸರ್ಕಾರ ನಗರ ಜಿಲ್ಲೆಯ ಜನರಿಗೆ ಶೇ. 75ರಷ್ಟು ಬೆಡ್ ಮೀಸಲಿಟ್ಟಿದ್ದು, ಗ್ರಾಮಾಂತರ ಜಿಲ್ಲೆಯವರಿಗೆ ಕೇವಲ ಶೇ. 25ರಷ್ಟು ಮಾತ್ರ ನೀಡಿರುವುದು ಖಂಡನೀಯ. ಗ್ರಾಮಾಂತರ ಪ್ರದೇಶದವರಿಗೆ ಹೆಚ್ಚಿನ ಬೆಡ್ ನೀಡಬೇಕು. ಅದರಲ್ಲೂ ಮೊದಲು ಬಂದವರಿಗೆ ಆದ್ಯತೆ ನೀಡಬೇಕು ಎಂದರು.
ಬೆಡ್ ಹಂಚಿಕೆ ಕುರಿತು ಗರಂ ಆದ ಶಾಸಕ ಶರತ್ ಬಚ್ಚೇಗೌಡ ಓದಿ : ಆನೇಕಲ್ ಬಳಿಯ ಸರ್ಕಾರಿ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ : ಸಂಸದ ನಾರಾಯಣ ಸ್ವಾಮಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಪ್ರತಿ ಗ್ರಾಮಗಳಲ್ಲೂ ಫಿವರ್ ಕ್ಲಿನಿಕ್ ತೆರೆಯಬೇಕು. ಹೋಂ ಕ್ವಾರಂಟೈನ್ ಆಗುವಂತಹ ಸೋಂಕಿತರಿಗೆ ಮೆಡಿಕಲ್ ಕಿಟ್ ನೀಡಬೇಕು ಮತ್ತು ಸೋಂಕಿತರ ಕುಟುಂಬಕ್ಕೆ 15 ದಿನಕ್ಕೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಿಟ್ ಅಥವಾ ಸಹಾಯಧನ ನೀಡುವಂತೆ ಆಗ್ರಹಿಸಿದರು.
ಕೊರೊನಾ ಹಬ್ಬಲು ಶುರುವಾದಾಗಿನಿಂದ ಇದುವರೆಗೆ ಒಂದೇ ಒಂದು ಬಾರಿ ಉಸ್ತುವಾರಿ ಸಚಿವರು ಹೊಸಕೋಟೆ ತಾಲೂಕಿಗೆ ಭೇಟಿ ನೀಡಿಲ್ಲ. ಕೇವಲ ದೇವನಹಳ್ಳಿಗೆ ಮಾತ್ರ ಸೀಮಿತರಾಗಿದ್ದಾರೆ. ಮುಂದಿನ ದಿನಗಳಲ್ಲಾದರೂ ಹೊಸಕೋಟೆಗೆ ಭೇಟಿ ನೀಡಿ ಎಂದು ಶಾಸಕ ಶರತ್ ಬಚ್ಚೇಗೌಡ ಒತ್ತಾಯಿಸಿದರು.