ಹೊಸಕೋಟೆ:ರಾಜ್ಯಾದ್ಯಂತ ಕೊರೊನಾ ಉಲ್ಬಣದ ನಡುವೆ ಎದುರಾಗುತ್ತಿರುವ ವೈದ್ಯಕೀಯ ಉಪಕರಣಗಳ ಬಿಕ್ಕಟ್ಟನ್ನು ನಿಭಾಯಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವೈದ್ಯಕೀಯ ನೆರವು ಸಿಗದೆ ಸಾಕಷ್ಟು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಖಾಸಗಿ ಕಂಪನಿಗಳ ಸಿಎಸ್ಆರ್ ಅನುದಾನ ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಅತ್ಯಾಧುನಿಕ ವಿದೇಶಿ ವೈದ್ಯಕೀಯ ಉಪಕರಣಗಳನ್ನು ವಿತರಿಸಿದ್ದಾರೆ.
ಹೊಸಕೋಟೆ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ ನೀಡಿದ ಶಾಸಕ ಬಚ್ಚೇಗೌಡ - ಹೊಸಕೋಟೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಉಚಿತವಾಗಿ ವೈದ್ಯಕೀಯ ಉಪಕರಣ ನೀಡಿದ ಶಾಸಕ ಬಚ್ಚೇಗೌಡ
ಶಾಸಕ ಶರತ್ ಬಚ್ಚೇಗೌಡ, ಕಂಪನಿಗಳ ಸಿಎಸ್ಆರ್ ಫಂಡ್ ಹಾಗೂ ತಮ್ಮ ಸ್ವಂತ ಹಣದಿಂದ ವೈದ್ಯಕೀಯ ಉಪಕರಣಗಳ ಖರೀದಿ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ್ದಾರೆ.

ಯುನೈಟೆಡ್ ವೇ ಕಂಪನಿಯ ಸಹಕಾರದೊಂದಿಗೆ ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ವೈದ್ಯಕೀಯ ಉಪಕರಣಗಳನ್ನು ನಗರದ ಮಿಷನ್ ಆಸ್ಪತ್ರೆ, ಶ್ರೀನಿವಾಸ ನರ್ಸಿಂಗ್ ಹೊಂ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಪ್ರತಿ ನಿಮಿಷಕ್ಕೆ ಹತ್ತು ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿದ ಉತ್ಪಾದನಾ ಕಾನ್ಸಂಟ್ರೇಟರ್ ಯಂತ್ರಗಳನ್ನು ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗೆ ನೀಡಲಾಗುತ್ತಿದ್ದು ಇದರಿಂದ ಸೋಂಕಿತರಿಗೆ ಹೆಚ್ಚಿನ ಸಹಕಾರವಾಗಲಿದೆ. ಬೆಂಗಳೂರಿನ ಯುನೈಟೆಡ್ ವೇ ಹಾಗೂ ಸ್ವಂತ ಹಣದಿಂದ ಈ ಆಮ್ಲಜನಕ ಕಾನ್ಸಂಟ್ರೇಟರ್ ಯಂತ್ರಗಳನ್ನು ಒದಗಿಸಲಾಗಿದ್ದು ಕೇವಲ ಯಂತ್ರಗಳ ವಿತರಣೆ ಆಲ್ಲದೆ ಅದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿ ಪ್ರಾಣ ಉಳಿಸುವ ಪ್ರಯತ್ನಗಳಲ್ಲಿ ಆಸ್ಪತ್ರೆಗಳ ವೈದ್ಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.