ಬೆಂಗಳೂರು:ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಸಾವಿರಾರು ಮಂದಿ ಮನೆಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಶಾಸಕ ಅರವಿಂದ್ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿದರು.
ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ಸಂಗ್ರಹ ಖುದ್ದು ಶಾಸಕ ಲಿಂಬಾವಳಿ ಮಾರತ್ಹಳ್ಳಿ ಮುಖ್ಯರಸ್ತೆಯ ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಪ್ರತಿಯೊಂದು ಅಂಗಡಿಯವರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಆದಷ್ಟು ಬೇಗ ಉತ್ತರ ಕರ್ನಾಟಕದ ಜನತೆಗೆ ತಲುಪಲಿ ಎಂದು ಆಶಿಸಿದರು.
ಬ್ರೆಡ್, ಬಿಸ್ಕೆಟ್, ಜ್ಯೂಸ್, ಅಕ್ಕಿ, ನೀರಿನ ಬಾಟಲಿಗಳು, ಟೂತ್ ಪೇಸ್ಟ್, ಕಂಬಳಿ, ಸೇರಿಂದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿರುವ ವಸ್ತುಗಳನ್ನು ರಾಷ್ಟ್ರೀಯ ಸ್ವಯಂಸೇವಾ ಸಂಘದ ಮೂಲಕ ನೆರೆ ಪೀಡಿತ ಪ್ರದೇಶಗಳಿಗೆ ತಲುಪಿಸಲಾಗುವುದು. ಕ್ಷೇತ್ರದ ಪ್ರತಿಯೊಂದು ವಾರ್ಡ್ಗಳಲ್ಲೂ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕಳಿಸಲಾಗುವುದು ಎಂದು ಶಾಸಕ ಲಿಂಬಾವಳಿ ತಿಳಿಸಿದರು.
ನೆರೆ ಸಂತ್ರಸ್ತರಿಗೆ ಮಿಡಿದ ಪೊಲೀಸರ ಹೃದಯ:
ಸಂತ್ರಸ್ತರ ಬದುಕು ಬವಣೆ ನೋಡಿದ ನೆಲಮಂಗಲ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ನೆಲಮಂಗಲ ಟೌನ್ ಎಸ್.ಐ, ಡಿ.ಆರ್ .ಮಂಜುನಾಥ್ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಬನ್, ಬಿಸ್ಕೆಟ್, ಚಾಪೆ, ಹೊದಿಕೆ, ಸೇರಿದಂತೆ ಒಂದು ಲಾರಿಯಷ್ಟು ಅಗತ್ಯ ವಸ್ತುಗಳನ್ನ ನೆರೆ ಸಂತ್ರಸ್ತರಿಗೆ ಕಳುಹಿಸಿದ್ದಾರೆ.