ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ''ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ'' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಅಹವಾಲುಗಳ ಸ್ವೀಕಾರ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಸಚಿವರು ಮತ್ತು ಶಾಸಕರ ಬೆಂಬಲಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ ಪರ ಅವರ ಬೆಂಬಲಿಗರು ಮತ್ತು ಶಾಸಕ ಶರತ್ ಬಚ್ಚೇಗೌಡ ಪರ ಅವರ ಬೆಂಬಲಿಗರು ಕಾರ್ಯಕ್ರಮದಲ್ಲಿ ಪರಸ್ಪರ ಪರ ವಿರೋಧ ಘೋಷಣೆಗಳನ್ನು ಕೂಗಿ ಗದ್ದಲದ ವಾತಾವರಣ ನಿರ್ಮಾಣ ಮಾಡಿದರು. ಇದೇ ವೇಳೆ ಪರ ವಿರೋದ ಘೋಷಣೆಗಳ ಕೂಗಿಗೆ ಬೇಸತ್ತ ಕಂದಾಯ ಸಚಿವ ಆರ್ ಅಶೋಕ್ ವೇದಿಕೆಯ ಮೇಲಿಂದ ಎದ್ದು, ಇದು ಸರ್ಕಾರಿ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಶಾಸಕರ ಬೆಂಬಲಿಗರಿಗೆ ಮನವಿ ಮಾಡಿದರು.
ಸಚಿವರ ಮತ್ತು ಶಾಸಕರ ಬೆಂಬಲಿಗರುಗಳಿಗೆ ಮನವಿ ಮಾಡಿದರು ಮತ್ತೆ, ತಮ್ಮ ನಾಯಕರುಗಳ ಪರ ಘೋಷಣೆ ಕೂಗಲು ಶುರು ಮಾಡಿದ ಹಿನ್ನೆಲೆಯಲ್ಲಿ ಸಚಿವ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿ ಘೋಷಣೆ ಕೂಗುವವರನ್ನು ಕಾರ್ಯಕ್ರಮದಿಂದ ಹೊರಗೆ ಹಾಕಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಇನ್ನು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ರೇವಣಪ್ಪ ಅವರನ್ನು ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
ಟ್ರಾಕ್ಟರ್ ಏರಿ ಗ್ರಾಮದಲ್ಲಿ ಸಂಚಾರ:ಜಡಿಗೇನಹಳ್ಳಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ಹಾಗೂ ಐತಿಹಾಸಿಕ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಸಚಿವರು ಅಲಂಕೃತವಾದ ಟ್ರಾಕ್ಟರ್ ಏರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಇದೇ ವೇಳೆ ಊರಿನ ಗ್ರಾಮಸ್ಥರು ಚಂಡೆ, ಮದ್ದಳೆ, ತಮಟೆ, ಡೊಳ್ಳು, ಕೀಲುಕುದುರೆ, ಮರಗಾಲು, ಬೊಂಬೆ ಕುಣಿತ, ಮಹಿಳೆಯರ ವೀರಗಾಸೆ, ಪಟ ಕುಣಿತ, ಪೂಜಾ ಕುಣಿತ ಮೊದಲಾದ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆಯ ಮೂಲಕ ಸಚಿವರನ್ನು ಸ್ವಾಗತಿಸಿದರು.