ಹೊಸಕೋಟೆ:ಕರ್ನಾಟಕದಲ್ಲಿ ಚುನಾವಣೆ ಅಲೆ ಎದ್ದಿದೆ. ಗೆಲುವಿಗಾಗಿ ರಾಜಕೀಯ ನಾಯಕರ ಸರ್ಕಸ್ ಜೋರಾಗಿದೆ. ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಕಂದಾಯ ಸಚಿವ ಆರ್.ಅಶೋಕ್ ಅವರು, ‘ಡಿ’ ಕಾಂಗ್ರೆಸ್ ಅನ್ನು ಸೋಲಿಸಲು ‘ಎಸ್’ ಕಾಂಗ್ರೆಸ್ಗೆ ಕೆಸಿಆರ್ 500 ಕೋಟಿ ರೂ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಹೊಸಕೋಟೆಯ ಜಡಿಗೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಹೂಡಿರುವ ಆರ್.ಅಶೋಕ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ‘ಎಸ್’ ಡಿ.ಕೆ.ಶಿವಕುಮಾರ್ ‘ಡಿ’ ನ ಸೋಲಿಸಲು 500 ಕೋಟಿ ರೂಪಾಯಿ ಸುಪಾರಿ ಕೊಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿಯೇ ‘ಡಿ’ ಕಾಂಗ್ರೆಸ್ ವರ್ಸಸ್ ‘ಎಸ್’ ಕಾಂಗ್ರೆಸ್ ಎಂದು ಇಬ್ಭಾಗವಾಗಿದೆ. ಈ ‘ಡಿ’ ಹಾಗೂ ‘ಎಸ್’ ಇವರಿಬ್ಬರಿಂದ ಬಿಜೆಪಿಗೆ ಲಾಭವಾಗುತ್ತೆ. ಹಾಗಂತ ಇವರಿಲ್ಲದಿದ್ದರೂ ನಮ್ಮ ಪಕ್ಷಕ್ಕೆ ಲಾಭವೇ ಎಂದು ಕಾಂಗ್ರೆಸ್ ಪಕ್ಷದ ಕುರಿತು ವ್ಯಂಗ್ಯಮಿಶ್ರಿತ ಧಾಟಿಯಿಂದಲೇ ಮಾತನಾಡಿದರು.
ಮುಂದುವರೆದು, ರಾಜ್ಯದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಹವಾ ಶುರುವಾಗಿದ್ದು ಈಗಾಗಲೇ ಬ್ಯಾಂಡ್ ಬಾರಿಸುತ್ತಿದ್ದಾರೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಫೆಬ್ರವರಿ 05ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಆಗಮಿಸಲಿದ್ದಾರೆ ಎಂದು ಹೇಳಿದರು. ಆಂಧ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ನನಗೂ ಸ್ನೇಹಿತರು ಎಂದಿರುವ ಆರ್.ಅಶೋಕ್, ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ, ನಾನು ಬಿಜೆಪಿ ಪಕ್ಷದಲ್ಲಿ ಇದ್ದೇನೆ ಅಷ್ಟೇ ಎಂದರು.