ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ಕರ್ನಾಟಕ ಸರ್ಕಾರದ ಬಗ್ಗೆ ಮೋದಿಗೆ ಗೌರವ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದರು. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಬಿಜೆಪಿ ಯುವ ಮುಖಂಡ ಧೀರಜ್ ಮುನಿರಾಜು ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಂಡರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಭಯ. ಅದಕ್ಕೆ ಅವರು ನಮ್ಮನ್ನು ಅವರೊಂದಿಗೆ ಸೇರಿಸಿಕೊಳ್ಳುತ್ತಿದ್ದಾರೆ, ನಾವು ಅವರ ಜೊತೆ ಇಲ್ಲ, ನಾವು ದೇಶದ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿ ಪರವಾಗಿ ಯೋಚನೆ ಮಾಡುವ ಬಿಜೆಪಿಯ ಜನ ನಾವು ಎಂದು ಟಾಂಗ್ ಕೊಟ್ಟರು.
ಮೋದಿಯವರಿಗೆ ಸೌತ್ ಇಂಡಿಯಾದಲ್ಲಿ ಕರ್ನಾಟಕವೇ ಬಹಳ ಮುಖ್ಯ. ಹೀಗಾಗಿ ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕವಾಗಿದ್ದು, ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಮತ್ತು ಅಭಿಮಾನ ಇದೆ, ಕರ್ನಾಟಕದಲ್ಲಿ ಅತಿವೃಷ್ಠಿ ಆದಾಗ, ಬೆಳೆ ಪರಿಹಾರಕ್ಕಾಗಿ, ಅತಿ ಹೆಚ್ಚು ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 1 ವರ್ಷ ಕಾಯಿಸುತ್ತಿದ್ದರು. ಈಗ 1 ತಿಂಗಳಲ್ಲಿ ಬೆಳೆ ಪರಿಹಾರವನ್ನು ಕೊಟ್ಟಂತಹ ದಾಖಲೆ ಕಂದಯ ಇಲಾಖೆಗೆ ಇದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ಇದಕ್ಕೆ ಕಾರಣ ಮೋದಿ ಅವರು ರೈಲ್ವೆ, ರಸ್ತೆ, ನೀರಾವರಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಕ್ಲಿಯರೆನ್ಸ್ ಕೂಡ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಕೊಡಲಿಲ್ಲ, ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಮೇಕೆದಾಟು, ಮಹದಾಯಿ ನೆನಪಿಗೆ ಬರಲಿಲ್ಲ, ಈಗ ಏಕಾಏಕಿ ಮೇಕೆದಾಟು, ಮಹದಾಯಿ ಏಕೆ ನೆನಪಿಗೆ ಬರುತ್ತಿದೆ ಎಂದು ಆರ್. ಅಶೋಕ್ ಅವರು ಕಾಂಗ್ರೆಸ್ಗೆ ಪ್ರಶ್ನಿಸಿದರು.
ಸಚಿವ ಆರ್ ಅಶೋಕ್ ವಾಗ್ದಾಳಿ:ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದುಬಿಡುತ್ತೇವೆ ಎಂಬ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲು ಅಲ್ಲ, ವಿರೋಧ ಪಕ್ಷದವರು ಸಹ ಆಗಲು ಲಾಯಕ್ಕಿಲ್ಲ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳಜಗಳವಿದೆ. ಜಿ ಪರಮೇಶ್ವರ್ ಸಹ ತಾವು ಸಿಎಂ ಅಂತಾರೆ, ಈಗ ಮಲ್ಲಿಕಾರ್ಜುನ ಖರ್ಗೆಯವರು ರೇಸ್ಗೆ ಬಂದಿದ್ದಾರೆ. ಸಿದ್ದರಾಮಯ್ಯ ನವರು ಸಹ ನಾನೇ ಸಿಎಂ ಆಗ್ತೇನೆ ಅಂತಾರೆ. ಡಿಕೆಶಿ ಯವರು ಜ್ಯೋತಿಷಿಗಳು ಹೇಳಿದ್ದಾರೆ, ತಾನು ಸಿಎಂ ಅಗ್ತೀನಿ ಅಂತಾರೆ. ಕಾಂಗ್ರೆಸ್ ಒಳ ಜಗಳದಲ್ಲಿ ಮುಳುಗಿರುವ ಪಕ್ಷ, ಕಳೆದ ಐದು ವರ್ಷ ಅಧಿಕಾರದಲ್ಲಿದ್ದಾಗ ಜನರಿಗೊಸ್ಕರ ಏನನ್ನೂ ಮಾಡಲಿಲ್ಲ ಎಂದು ಅಶೋಕ್ ಆರೋಪಿಸಿದರು.