ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳು ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಮತ್ತು ಜಿಂಕೆಗಳು ಸಾವನ್ನಪ್ಪಿವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಫೆಲೈನ್ ಎಂಬ ವೈರಸ್ ಸೋಂಕಿನಿಂದ ಚಿರತೆಗಳು ಸಾವನ್ನಪ್ಪಿವೆ. ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ವ್ಯಾಕ್ಸಿನೇಷನ್ ಕೂಡ ನೀಡಿದ್ದಾರೆ ಎಂದು ಹೇಳಿದರು.
16 ಜಿಂಕೆಗಳು ಮತ್ತು 7 ಚಿರತೆ ಮರಿಗಳು ಸಾವನ್ನಪ್ಪಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಜಿಂಕೆಗಳು ಸಾವನ್ನಪ್ಪಿವೆ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು. ವರದಿ ಬಂದ ಕೂಡಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಉನ್ನತ ಅಧಿಕಾರಿಗಳೊಂದಿಗೆ ಸಚಿವರ ಸಭೆ :ರಾಜ್ಯದ ಯಾವುದೇ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಖಂಡ್ರೆ ಸೂಚನೆ ನೀಡಿದರು. ಬನ್ನೇರುಘಟ್ಟ ಉದ್ಯಾನವನದಲ್ಲಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ (ಎಫ್.ಪಿ.ವಿ.) ವೈರಾಣು ಸೋಂಕಿನಿಂದ 7 ಚಿರತೆ ಮರಿಗಳು ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೇ ಉದರ ಸಂಬಂಧಿ ಕಾಯಿಲೆ (ಹೆಮೊರೈಜಿಕ್ ಎಂಟ್ರೈಟಿಸ್ ಮತ್ತು ಎಂಡೋಕಾರ್ಡೈಟಿಸ್)ಯಿಂದ ಹಾಗೂ ಪರಸ್ಪರ ಸಂಘರ್ಷದಿಂದ ಒಂದು ವಾರದಲ್ಲೇ 16 ಜಿಂಕೆಗಳು ಸಾವನ್ನಪ್ಪಿದ್ದವು.
ಈ ಉದ್ಯಾನವನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೇ ಸಿಬ್ಬಂದಿ ರಾಜ್ಯದ ಬೇರೆ ಯಾವುದೇ ಮೃಗಾಲಯಕ್ಕೆ ಭೇಟಿ ನೀಡದಂತೆ ಆದೇಶಿಸಿದರು. ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಇತರ ಮೃಗಾಲಯಗಳಲ್ಲಿನ ಚಿರತೆ, ಸಿಂಹ, ಹುಲಿ, ಕಾಡು ಬೆಕ್ಕು ಇತ್ಯಾದಿಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಿದರು.