ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಕೆಆರ್ಪುರಂ ಬೈಯಪ್ಪನಹಳ್ಳಿ ಮೆಟ್ರೋ ಚಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ''ಮೆಟ್ರೋ ಪ್ರಾರಂಭ ಮಾಡಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. ಇದರಲ್ಲಿ ಬಿಜೆಪಿ ಪಾತ್ರ ಇಲ್ಲ'' ಎಂದು ಹೇಳಿದರು.
''ತಾಂತ್ರಿಕವಾಗಿ ಎಲ್ಲಾ ಸರಿ ಇದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ರೆ ಸಿಎಂ ಉದ್ಘಾಟನೆ ಮಾಡುತ್ತಾರೆ. ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡದೆ ಹೇಗೆ ಉದ್ಘಾಟನೆ ಮಾಡಲು ಸಾಧ್ಯ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹೆಸರು ಬದಲಾಯಿಸುವುದು ಹಾಗೂ ಪ್ರತಿಮೆಗಳನ್ನು ಮಾಡಲು ಅಷ್ಟೆ ಬಿಜೆಪಿ ಅವರು ಲಾಯಕ್ ಇದ್ದಾರೆ'' ಎಂದು ಕಿಡಿಕಾರಿದರು.
ಮೋದಿಗೂ ಮೆಟ್ರೋಗೂ ಯಾವುದೇ ಸಂಬಂಧವಿಲ್ಲ- ರಾಮಲಿಂಗಾರೆಡ್ಡಿ: ''ಬಿಜೆಪಿಯವರು ಯಾವುದೇ ಪ್ರೋಗ್ರೆಸ್ಸಿವ್ ಕೆಲಸ ಮಾಡಲ್ಲ. ಹೇಳಿಕೆಗಳನ್ನು ನೀಡುವ ಮೂಲಕ ಅವರ ಬೇಳೆಯನ್ನು ಮಾತ್ರ ಬೇಯಿಸಿಕೊಳ್ಳುತ್ತಾರೆ. ಮೋದಿಗೂ ಮೆಟ್ರೋಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಮೋದಿಯವರ ಪಾತ್ರವೇನು ಇಲ್ಲ. ಮನಮೋಹನ್ ಸಿಂಗ್ ಸರ್ಕಾರ ಅಂದು ಪ್ರಾರಂಭ ಮಾಡಿದ್ದು, ಕೇಂದ್ರ ಸರ್ಕಾರದಿಂದ ಸ್ವಲ್ಪ ಹಣ ಮಾತ್ರ ಬಂದಿದೆ ಅಷ್ಟೆ. ಎಲ್ಲವೂ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದೆ'' ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ:ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ''ಬಿಜೆಪಿಯವರು ಅಧಿಕಾರದಲ್ಲಿ ಇಲ್ಲದಿದ್ದಾಗ ಕಿತಾಪತಿ ಮಾಡುವುದು ಕಿತ್ತಾಟ ತಂದಿಡುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ವಿರುದ್ಧ ಅಪಪ್ರಚಾರದ ಕೆಲಸವನ್ನು ಅವರು ಮೊದಲಿನಿಂದಲೂ ಮಾಡುತ್ತಾ ಬರುತ್ತಿದ್ದಾರೆ. ನೈತಿಕ ಪೊಲೀಸ್ಗಿರಿ ಮಾಡುವ ಮೂಲಕ ಗಲಾಟೆ ಎಬ್ಬಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೇ ವೇಷ ಹಾಗೂ ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡಲು ಮುಂದಾಗುತ್ತಿದ್ದಾರೆ. ಇದೆಲ್ಲ ಅವರ ಹುಟ್ಟುಗುಣವಾಗಿದೆ'' ಎಂದು ಬಿಜೆಪಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪ ಮಾಡಿದರು.
ಇದನ್ನೂ ಓದಿ:ಚಿಲುಮೆ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ವಿಚಾರ: ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದೇನು?