ಹೊಸಕೋಟೆ:ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಔಷಧಿಗಳನ್ನು ವಶಪಡಿಸಿಕೊಂಡಿದ್ದ ಹೊಸಕೋಟೆ ವೈದ್ಯಾಧಿಕಾರಿ ನಾಪತ್ತೆಯಾಗಿದ್ದಾರೆ.
ಡಾ. ಮಂಜುನಾಥ್ ಎಸ್.ಆರ್ ನಾಪತ್ತೆಯಾದ ವೈದ್ಯಾಧಿಕಾರಿ. ಇವರು ಡಿಸೆಂಬರ್ 10 ರಂದು ಖಾಸಗಿ ಕ್ಲಿನಿಕ್ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ಔಷಧಿಗಳ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರು. ನಂತರ ಇದೇ 16ರಂದು ಅವರು ಕಾಣೆಯಾಗಿದ್ದಾರೆ. ಹಾಗಾಗಿ ಇದೀಗ, ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಪ್ರಕರಣ ಮತ್ತು ಅಧಿಕಾರಿ ಕಾಣೆ ಎರಡೂ ಘಟನೆಗಳೂ ತಳುಕು ಹಾಕಿಕೊಂಡಿವೆ. ಇದೇ ವಿಚಾರವಾಗಿ ಅವರು ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಅಕ್ರಮ ಔಷಧಿಗಳನ್ನು ವಶಕ್ಕೆ ಪಡೆದಿದ್ದ ವೈದ್ಯಾಧಿಕಾರಿ ನಾಪತ್ತೆ ಡಿಸೆಂಬರ್ 15ರ ಸಂಜೆಯಿಂದ ವೈದ್ಯಾಧಿಕಾರಿ ಮನೆಗೆ ಬಂದಿಲ್ಲ. ದೂರವಾಣಿ ಕರೆಗೂ ಸಿಗುತ್ತಿಲ್ಲ. ಕುಟುಂಬಸ್ಥರ ಮಾಹಿತಿ ಮೇರೆಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರಿಗೆ ಹೊಸಕೋಟೆಯ ಪ್ರಮುಖ ರಾಜಕೀಯ ಮುಖಂಡರಿಂದ ಬೆದರಿಕೆ ಬಂದಿದೆ ಎನ್ನಲಾಗಿದೆ. ಅದೇ ವಿಚಾರವಾಗಿ ಬಿಜೆಪಿ ಮುಖಂಡ ಲಯನ್ಸ್ ಜಯರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ 7.45ರ ಸಮಯದಲ್ಲಿ ಡಾ.ಮಂಜುನಾಥ್ ಚನ್ನಪಟ್ಟಣದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸಂಜೆಯೊಳಗೆ ಹೊಸಕೋಟೆಗೆ ಬರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದ್ದಾರೆ ಎನ್ನಲಾಗಿದೆ.