ಕರ್ನಾಟಕ

karnataka

ETV Bharat / state

ಆನೇಕಲ್: ಕಾವೇರಿಗಾಗಿ ವಾಟಾಳ್ ನಾಗರಾಜ್​ ನೇತೃತ್ವದಲ್ಲಿ ಬೃಹತ್​ ಪ್ರತಿಭಟನೆ

ಸರ್ವ ಪಕ್ಷಗಳ ಸಭೆಗೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಗೈರಾಗುವ ಮೂಲಕ ಬಿಜೆಪಿಗೆ ರಾಜ್ಯದ ರೈತ, ಜನತೆಯ ಹಿತ ಮುಖ್ಯವಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.

massive-protest-led-by-watal-nagaraj-for-cauvery-in-anekal
ಆನೇಕಲ್: ಕಾವೇರಿಗಾಗಿ ವಾಟಾಳ್ ನಾಗರಾಜ್​ ನೇತೃತ್ವದಲ್ಲಿ ಬೃಹತ್​ ಪ್ರತಿಭಟನೆ

By ETV Bharat Karnataka Team

Published : Sep 13, 2023, 10:12 PM IST

Updated : Sep 13, 2023, 10:34 PM IST

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್

ಆನೇಕಲ್(ಬೆಂಗಳೂರು):ಕಾಂಗ್ರೆಸ್ ಅಧಿಕಾರದಲ್ಲಿಲ್ಲದಿದ್ದಾಗ ರಾಜ್ಯ- ಕೇಂದ್ರದ ಬಿಜೆಪಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ತೀವ್ರ ತೆರನಾದ ಪಾದಯಾತ್ರೆ ನಡೆಸಿ ಹೋರಾಟಕ್ಕೆ ಇಳಿದು ಈಗ ಉಪಮುಖ್ಯಮಂತ್ರಿ ಆದ ತಕ್ಷಣವೇ ಮಾತು ಮರೆತ ಡಿ ಕೆ ಶಿವಕುಮಾರ್ ನಿಮ್ಮ ನಿಲುವೇನು? ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದರು. ಕನ್ನಡ ಚಳವಳಿ ವಾಟಾಳ್​ ಪಕ್ಷದಿಂದ ಬೃಹತ್​ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಇಂದು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಹಿರಿಯ ರೈತ ಮುಖಂಡರೆನಿಸಿಕೊಂಡಿರುವ ಯಡಿಯೂರಪ್ಪ ದೆಹಲಿಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ತೆರಳುವ ಮೂಲಕ ಬಿಜೆಪಿಗೆ ರಾಜ್ಯದ ರೈತ, ಜನತೆಯ ಹಿತ ಮುಖ್ಯವಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕಿಡಿಕಾರಿದರು.

ಇಂಡಿಯಾದ ಸದಸ್ಯರೂ ಆಗಿರುವ ರಾಜ್ಯ ಕಾಂಗ್ರೆಸ್, ಸ್ಟಾಲಿನ್ ಬ್ಲಾಕ್ ಮೇಲ್ ತಂತ್ರಗಾರಿಕೆಗೆ ಮೃದುವಾಗಿ ಬೆಂಬಲ ಸೂಚಿಸಿದೆ. ಹೀಗಾಗಿ ಎರಡೂ ಪಕ್ಷಗಳು ರಾಜ್ಯದ ಹಿತ ಕಾಪಾಡುವಲ್ಲಿ ಸೋತಿವೆ. ಆದ್ದರಿಂದ ನಾಳೆ ಬೆಂಗಳೂರು ರಾಜಧಾನಿಯ ಮೈಸೂರು ವೃತ್ತದಲ್ಲಿ ಸ್ಟಾಲಿನ್ ಪ್ರತಿಕೃತಿಯ ದಹನ, ರಸ್ತೆ ತಡೆ, ಕಪ್ಪು ಬಟ್ಟೆ ಪ್ರದರ್ಶನ, ಕರಾಳದಿನದ ಮೂಲಕ ಬಂದ್ ನಡೆಸುವುದಾಗಿ ವಾಟಳ್​ ನಾಗರಾಜ್​ ಎಚ್ಚರಿಕೆ ನೀಡಿದರು.

ಕಾವೇರಿ ನ್ಯಾಯಾಧೀಕರಣ ಪ್ರಾಧಿಕಾರದವರು ದೆಹಲಿಯಲ್ಲಿ ಕೂತು ತೀರ್ಪು ನೀಡಿದರೆ ಸಾಲದು, ಬದಲಿಗೆ ರಾಜ್ಯದ ಹೇಮಾವತಿ, ಕೃಷ್ಣರಾಜ ಸಾಗರ, ಕಬಿನಿ ಮತ್ತು ಹಾರಂಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣವನ್ನು ಗಮನಿಸಿ ತೀರ್ಪು ನೀಡಬೇಕಾಗಿತ್ತು. ಯಾರೂ ಕೇಳುವವರಿಲ್ಲ ಎಂದು ಮನಸ್ಸಿಗೆ ಬಂದ ಹಾಗೆ ತೀರ್ಮಾನ ಕೈಗೊಂಡಿದ್ದು, ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತೆ. ತಮಿಳುನಾಡಿನ ಖ್ಯಾತ ಚಲನ ಚಿತ್ರ ನಟರಾದ ಕಮಲ್ ಹಾಸನ್ ಮತ್ತು ರಜನಿಕಾಂತ್​ರಿಗೆ ಈಗ ಕರ್ನಾಟಕದ ಪರ ಮಾತನಾಡಿ ಎಂದು ಆಗ್ರಹಿಸಿದರು. ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೂ ಸಹಾಯವಾಗುತ್ತದೆ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ತ್ವರಿತಗತಿಯಲ್ಲಿ ನಿರ್ಮಿಸಿ ರಾಜ್ಯದ ಹಿತ ಕಾಪಾಡಬೇಕು ಎಂದರು.

ಇದಕ್ಕೂ ಮೊದಲು, ಪ್ರತಿದಿನ 5 ಕ್ಯೂಸೆಕ್​ ​ ನೀರನ್ನು ತಮಿಳುನಾಡಿಗೆ 15 ದಿನ ಬಿಡುವಂತೆ ಕಾವೇರಿ ನ್ಯಾಯಾಧೀಕರಣ ಪ್ರಾಧಿಕಾರದ ತೀರ್ಪನ್ನು ವಿರೋಧಿಸಿ ಖಾಲಿ ಕೊಡದ ಮೂಲಕ ತಮಿಳುನಾಡು - ಕರ್ನಾಟಕ ಗಡಿ ಅತ್ತಿಬೆಲೆ ಅಂತರರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಯನ್ನು ಕನ್ನಡ ಚಳವಳಿ ವಾಟಳ್​ ಪಕ್ಷ ಹಾಗೂ ಕನ್ನಡ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಡೆಸಿದರು. ಅತ್ತಿಬೆಲೆ ಟೋಲ್​ಗೇಟ್ ನಿಂದ ಗಡಿ ಗೋಪುರದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಸ್ಟಾಲಿನ್ ಭಾವಚಿತ್ರ ಹಿಡಿದು ತಮಿಳುನಾಡು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಗ್ರಾಮಾಂತರ ಎಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ಸರ್ವಪಕ್ಷ ಸಭೆಗೆ ಬಿಎಸ್​ವೈ, ಬೊಮ್ಮಾಯಿ ಗೈರು.. ಹೆಚ್​ಡಿಕೆ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ

Last Updated : Sep 13, 2023, 10:34 PM IST

ABOUT THE AUTHOR

...view details