ಬೆಂಗಳೂರು:ಪರಸ್ ಆರ್ಯ (5/22) ಅದ್ಭುತ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 31 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ. ಬೆಂಗಳೂರು ಬ್ಲಾಸ್ಟರ್ಸ್ ಸತತ ಆರು ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ. ಪಂದ್ಯಾವಳಿಯಲ್ಲಿ ಮೊದಲ ಐದು ವಿಕೆಟ್ ಕಬಳಿಸಿ ಪರಸ್ ಆರ್ಯ ಮಂಗಳೂರು ಡ್ರಾಗನ್ಸ್ ತಂಡವನ್ನು ಆರಾಮದಾಯಕ ಗೆಲುವಿನತ್ತ ಮುನ್ನಡೆಸಿದರು.
ಬೆಂಗಳೂರು ಬ್ಲಾಸ್ಟರ್ಸ್‌ನ ನಾಯಕ ಮಯಾಂಕ್ ಅಗರ್‌ವಾಲ್ ಟಾಸ್ ಗೆದ್ದು ಮಂಗಳೂರು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಮಂಗಳೂರು ಪವರ್‌ಪ್ಲೇನಲ್ಲಿ 46 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕೆವಿ ಸಿದ್ಧಾರ್ಥ್ (23) ರೋಹನ್ ಪಾಟೀಲ್ (28) ಉತ್ತಮ ಕೊಡುಗೆ ನೀಡಿದರು. ರೋಹನ್ ಪಾಟೀಲ್ 10ನೇ ಓವರ್‌ನಲ್ಲಿ ಚೈನಾಮನ್ ಸರ್ಫರಾಜ್ ಅಶ್ರಫ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ನಂತರ ಬಂದ ಬಿ.ಆರ್. ಶರತ್ (21) ಮತ್ತು ಗೌರವ್ ಧಿಮಾನ್ (11) ರನ್ ಗಳಿಸಿ ಕ್ರಮವಾಗಿ 11 ಮತ್ತು 12 ನೇ ಓವರ್‌ಗಳಲ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಮಂಗಳೂರು ಡ್ರಾಗನ್ಸ್ 4 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಅನೀಶ್ವರ್ ಗೌತಮ್ (32) ಮತ್ತು ಅನಿರುದ್ಧ ಜೋಶಿ (39) ರನ್‌ಗಳ ಜೊತೆಯಾಟದ ನೆರವಿನಿಂದ ಮಂಗಳೂರು ಡ್ರ್ಯಾಗನ್‌ಗಳು 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರ ಸರ್ಫರಾಜ್ ಅಶ್ರಫ್ (2/21), ಎಲ್.ಆರ್. ಕುಮಾರ್ (2/27) ಮತ್ತು ಟಿ. ಪ್ರದೀಪ್ (2/34) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಎಡಗೈ ಸ್ಪಿನ್ನರ್ ಪರಸ್ ಆರ್ಯ ಅಬ್ಬರಕ್ಕೆ ಬೆಂಗಳೂರು ತತ್ತರ:ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿ ಮತ್ತೊಂದು ಕಳಪೆ ಆರಂಭ ಪಡೆಯಿತು. ಮಂಗಳೂರು ಸ್ಪಿನ್ನರ್ ಆನಂದ್ ದೊಡ್ಡಮನಿ ಎರಡನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಡಿ. ನಿಶ್ಚಲ್ (9) ಮತ್ತು ಜೆಸ್ವಂತ್ ಆಚಾರ್ಯ (0) ವಿಕೆಟ್‌ಗಳನ್ನು ಪಡೆದರು. ನಂತರ ಬಂದ ಪವನ್ ದೇಶಪಾಂಡೆ (4), ಸೂರಜ್ ಅಹುಜಾ (5) ರನ್‌ಗಳಿಗಷ್ಟೇ ಸೀಮಿತವಾದರು. ಪವರ್ ಪ್ಲೇ ಅಂತ್ಯವಾಗುತ್ತಿದ್ದಂತೆ ಮಯಾಂಕ್ ಅಗರ್ವಾಲ್ (23) ರನ್ ಗಳಿಸಿದ್ದಾಗ ಪರಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.