ನೆಲಮಂಗಲ :ಹೆಂಡತಿಯನ್ನು ತವರಿಗೆ ಬಿಟ್ಟು ಬಂದ ವ್ಯಕ್ತಿ ವಾರದಿಂದ ನಾಪತ್ತೆಯಾಗಿದ್ದರು. ಇದೀಗ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿಗೂಢ ಸಾವು ಸಂಬಂಧಿಕರ ಸಂಶಯಕ್ಕೆ ಕಾರಣವಾಗಿದೆ.
ನೆಲಮಂಗಲ ದಾನೋಜಿಪಾಳ್ಯದ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ ಶವ ದೊರೆತಿದೆ. ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರದ ಸಂತೋಷ್ ಕುಮಾರ್ (33) ಸಾವಿಗೀಡಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತೋಷ್ ಕುಮಾರ್ ದೊಡ್ಡಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದ ಪಕ್ಕದಲ್ಲಿ ಶ್ರೀಸಾಯಿ ಚಾಟ್ಸ್ ಸೆಂಟರ್ ನಡೆಸುತ್ತಿದ್ದು, ದಿವ್ಯಾ ಎಂಬಾಕೆಯನ್ನು ಮದುವೆಯಾಗಿದ್ದರು. ದಂಪತಿಗೆ 3 ವರ್ಷದ ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ : ಸಂತೋಷ್ ಕುಮಾರ್, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಿ ಗ್ರಾಮದವರು. ಕಳೆದ 15 ವರ್ಷಗಳಿಂದ ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು. ಅತ್ತೆಯ ಮಗಳು ದಿವ್ಯಾರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಮದ್ಯವ್ಯಸನಿ ಕುಟುಂಬದಲ್ಲಿ ಕಲಹಕ್ಕೂ ಕಾರಣವಾಗಿತ್ತು. ಕುಡಿತ ಬಿಡಿಸಲು ಪುನರ್ವಸತಿ ಕೇಂದ್ರಕ್ಕೂ ಸೇರಿಸಲಾಗಿತ್ತು. ಕೇಂದ್ರದಿಂದ ಬಂದಿದ್ದ ಇವರು ಹೆಂಡತಿ, ಮಗುವನ್ನು ಕರೆದುಕೊಂಡು ಹೊಳೆನರಸೀಪುರದ ದೇವಸ್ಥಾನಕ್ಕೆ ಹೋಗಿದ್ದರು. ಮನೆಗೆ ವಾಪಸ್ ಬರುವಾಗ ಹೆಂಡತಿಯ ತವರು ಮನೆಗೆ ಹೋಗಿದ್ದಾರೆ. ಅಲ್ಲಿ ಹೆಂಡತಿಯ ಕುಟುಂಬಸ್ಥರ ನಡುವೆ ಜಗಳವಾಗಿದ್ದು ಹೆಂಡತಿ, ಮಗುವನ್ನು ಅಲ್ಲಿಯೇ ಬಿಟ್ಟು ಬಂದಿದ್ದರು.