ದೊಡ್ಡಬಳ್ಳಾಪುರ (ಬೆಂ.ಗ್ರಾ): ಪತಿ ಹಾಗು ಪತ್ನಿ ನಡುವಿನ ಕೌಟುಂಬಿಕ ಕಲಹ ಪತಿಯ ಕೊಲೆಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ಹೊರವಲಯದ ಕರೇನಹಳ್ಳಿಯ ಬಳಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕೊಲೆಯಾದಾತನನ್ನು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ನಿವಾಸಿ ನವೀನ್ (30) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ವಿವರ
ಕೊಲೆಯಾದ ನವೀನ್ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿಯಾಗಿದ್ದು, ತೆಲುಗು ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಕಾರಣಕ್ಕೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದ. ಈ ಸಮಯದಲ್ಲಿ ದೊಡ್ಡಬಳ್ಳಾಪುರ ನಗರದ ಗಾಯಿತ್ರಿ ಎಂಬಾಕೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಆದರೆ ವಿವಾಹವಾಗುವಾಗ ಇಬ್ಬರಿಗೂ 16 ವರ್ಷವಾಗಿತ್ತು. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ನವೀನ್ ಡ್ರೈವರ್ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ಕಳೆದೊಂದು ವರ್ಷದ ಹಿಂದೆ ಗಂಡ-ಹೆಂಡತಿ ನಡುವೆ ಜಗಳವಾಗಿ, ಇಬ್ಬರು ಬೇರೆ ಬೇರೆ ವಾಸವಾಗಿದ್ದರು.