ದೊಡ್ಡಬಳ್ಳಾಪುರ: ತಹಶೀಲ್ದಾರ್ ಕಚೇರಿಗೆ ಹೋಗಿ ಬರುವುದಾಗಿ ಹೇಳಿದ ಮಗ ಮನೆಗೆ ವಾಪಸ್ ಬರಲಿಲ್ಲ, ಬದಲಾಗಿ ಮರುದಿನ ಬೆಳಗ್ಗೆ ಕಟ್ಟುತ್ತಿರುವ ಕಟ್ಟಡದಲ್ಲಿ ಹೆಣವಾಗಿ ಬಿದ್ದಿದ್ದ. ಮಗ ಸತ್ತು 13 ದಿನ ಕಳೆದರೂ ಮಗನ ಸಾವಿನ ರಹಸ್ಯ ಬಯಲಾಗಿಲ್ಲ. ಮಗ ಮತ್ತೆ ಬರುವುದಿಲ್ಲ ಆದರೆ, ಅವನ ಸಾವಿನ ರಹಸ್ಯವನ್ನಾದರೂ ಬಯಲು ಮಾಡುವಂತೆ ನೊಂದ ತಾಯಿ ಕಣ್ಣಿರು ಹಾಕುತ್ತಿದ್ದಾರೆ. ನಾಲ್ಕು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಿರಿಯ ಪುತ್ರ ಹರೀಶ್ ಕುಮಾರ ಮನೆಮಂದಿಗೆಲ್ಲ ಮುದ್ದಿನ ಮಗನಾಗಿದ್ದನಂತೆ. ಆದರೆ, ಈತನ ಸಾವು ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.
ವಿವರ: ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನಪೇಟೆಯ ರಂಗರಾಜು ಮತ್ತು ಸುಶೀಲಮ್ಮ ದಂಪತಿಯ ಕೊನೆಯ ಮಗ ಈ ಹರೀಶ್ ಕುಮಾರ್(33) ವಕೀಲರಾದ ಕೃಷ್ಣಮೂರ್ತಿಯವರ ಬಳಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದ, ತನ್ನ ಶಾಂತ ಸ್ವಭಾವದಿಂದ ಎಲ್ಲರಿಗೂ ಆಪ್ತ ಸ್ನೇಹಿತನಾಗಿದ್ದ. ಮೇ 10 ರ ಸಂಜೆ 5 ಗಂಟೆಯ ಸಮಯದಲ್ಲಿ ತಹಶೀಲ್ದಾರ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದ ಆತನಿಗೆ ರಾತ್ರಿ 7 ಗಂಟೆಗೆ ಪೋಷಕರು ಫೋನ್ ಮಾಡಿದಾಗ ತಹಶೀಲ್ದಾರ್ ಕಚೇರಿಯಲ್ಲಿ ಇರುವುದಾಗಿ ಹೇಳಿದ್ದಾನಂತೆ. ಆದರೆ, ಮರುದಿನ ಶವವಾಗಿ ಪತ್ತೆಯಾಗಿದ್ದಾನೆ.