ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ಲಾರಿಯೊಂದು ಬೈಕ್ ಸವಾರನ ಮೇಲೆ ಉರುಳಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೂಗೇನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಮಾವಿನಕುಂಟೆ ನಿವಾಸಿ ರಾಜು (32) ಎಂದು ಗುರುತಿಸಲಾಗಿದೆ.
ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಯುವಕ ಸಾವನ್ನಪ್ಪಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ನ್ಯಾಯ ಸಿಗುವವರೆಗೂ ಶವ ತೆರವು ಮಾಡುವುದಿಲ್ಲವೆಂದು ಗ್ರಾಮಸ್ದರು ಪ್ರತಿಭಟನೆಗೆ ಮುಂದಾಗಿದ್ದು, ಶಾಸಕ ಟಿ ವೆಂಕಟರಮಣಯ್ಯ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಅವೈಜ್ಞಾನಿಕ ಕಸ ವಿಲೇವಾರಿ: ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ದೊಡ್ಡಬಳ್ಳಾಪುರ ತಾಲೂಕಿನ ಚಿಗೇರನಹಳ್ಳಿಯ MSGP ಘಟಕದಲ್ಲಿ ತಂದು ಸುರಿಯಲಾಗುತ್ತಿದೆ. ಇಲ್ಲಿ ಒಪ್ಪಂದದ ಪ್ರಕಾರ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಾಗಿ ಪ್ರಾರಂಭವಾದ MSGP ಘಟಕ ಕೇವಲ ಕಸ ಸಂಗ್ರಹಣೆ ಮಾತ್ರ ಮಾಡುತ್ತಿದೆ. ಈಗಾಗಲೇ ಸ್ಥಳದಲ್ಲಿ ಕಸದ ರಾಶಿಯೇ ತುಂಬಿದ್ದು, ಇದರಿಂದಾಗಿ ಜನರ ಆರೋಗ್ಯ ಹದಗೆಡುವಂತಾಗಿದೆ. ಹೀಗಾಗಿ MSGP ಘಟಕದ ತೆರವಿಗಾಗಿ 2015ರಿಂದ ಹೋರಾಟ ನಡೆಸಲಾಗುತ್ತಿದೆ.