ಆನೇಕಲ್: ನಗರದಲ್ಲಿ ರಸ್ತೆ ಕಾಮಗಾರಿ ವೇಳೆ ಮಾಡಿದ ಎಡವಟ್ಟಿನಿಂದ ಬೈಕ್ ಸವಾರರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಆನೇಕಲ್-ಹೊಸೂರು ರಸ್ತೆಯ ಸಮಂದೂರು ಬಳಿ ರಸ್ತೆ ಪಕ್ಕದ ಮರ ತೆಗೆಯಲು ಗುಂಡಿ ತೋಡಿದ್ದರು. ಇದನ್ನು ಗಮನಿಸದೆ ರಸ್ತೆಯಲ್ಲಿ ರಾತ್ರಿ ಸಂಚರಿಸುತ್ತಿದ್ದ ಸಬ್ಮಂಗಲ ವಾಸಿ ಮಹದೇಶಪ್ಪ (48) ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಇದರಿಂದ ಬುಧವಾರ ಮಧ್ಯಾಹ್ನ ರೊಚ್ಚಿಗೆದ್ದ ಸುತ್ತಮುತ್ತಲ ಹಳ್ಳಿಯವರು ಮೂರು ವರ್ಷದಿಂದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ಟೆಂಡರ್ದಾರನ ಮೇಲೆ ಪ್ರತಿಭಟನೆಗೆ ಮುಂದಾದರು.
ಬೈಕ್ ಸವಾರ ಮೃತಪಟ್ಟಿದ್ದರ ಕುರಿತು ಸಾರ್ವಜನಿಕರಿಂದ ಆಕ್ರೋಶ ರಸ್ತೆ ಕಾಮಗಾರಿಯ ಸಹಕಂಟ್ರಾಕ್ಟರ್ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಕಾಮಗಾರಿ ಪೂರ್ಣಗೊಳಿಸುವಂತೆ ಅರ್ಜಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ಹೇಳಿದರು.
ಕಳೆದ ಮೂರು ವರ್ಷದಿಂದ ಬೆಸ್ಕಾಂ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಗಾರಿಗೆ ನಡೆಯದೆ ವರ್ಷಗಳೇ ಕಳೆದಿವೆ ಎಂದು ಸ್ಥಳೀಯ ನಿವಾಸಿ ಮಧುಕುಮಾರ್ ದೂರಿದರು.
ಈವರೆಗೆ ರಸ್ತೆ ಕಾಮಗಾರಿ ವಿಳಂಬದಿಂದ ಆರೇಳು ಮಂದಿ ಬಲಿಯಾಗಿದ್ದಾರೆಂದು ಮೃತ ಮಾದೇಶಪ್ಪನ ಸಹೋದರ ಮಂಜುನಾಥ್ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆನೇಕಲ್ ತಹಶೀಲ್ದಾರ್ ದಿನೇಶ್ ಪ್ರತಿಭಟನಾಕಾರರ ಮನವೊಲಿಸಿದರು.
ಇದನ್ನೂ ಓದಿ:ವಿಜಯಪುರ: 10 ಲಕ್ಷ ರೂ. ಮೌಲ್ಯದ 100 ಕೆಜಿ ಗಾಂಜಾ ಜಪ್ತಿ