ನೆಲಮಂಗಲ: ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಪದೇ ಪದೆ ಭೂ ಕಬಳಿಕೆ ಆರೋಪಗಳು ಕೇಳಿ ಬರುತ್ತಿವೆ. 2007ರಲ್ಲಿ ಶಾಸಕರಾಗಿದ್ದಾಗ ತಾವೇ ಅಧ್ಯಕ್ಷರಾಗಿರುವ ಜನತಾ ಎಜುಕೇಷನ್ ಸೊಸೈಟಿ ಹೆಸರಿನಲ್ಲಿ ಕೋಟಿ ಕೋಟಿ ಬೆಲೆಬಾಳುವ ಗೋಮಾಳ ಜಮೀನನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದು, ನಮಗೆ ಅನ್ಯಾಯ ಆಗಿದೆ, ನ್ಯಾಯ ಒದಗಿಸಿ ಎಂದು ರೈತರು ಮನವಿ ಮಾಡಿದ್ದರು. ಆದರೆ ಶಾಸಕರು ಪೊಲೀಸರ ನೆರವು ಪಡೆದು ಸ್ವಾಧೀನಕ್ಕೆ ಬರಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜಮೀನನ್ನು ಸ್ವಾಧೀನದಲ್ಲಿರುವ ರೈತರಿಗೆ ತಿಳಿಯದೇ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಜನತಾ ಎಜುಕೇಷನ್ ಸೊಸೈಟಿಯವರು ಖರೀದಿಸಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಗ್ರಾಮದ ಸರ್ವೆ ನಂಬರ್ 52ರ 6 ಎಕರೆ 17 ಕುಂಟೆ ಜಮೀನು ಈ ವಿವಾದಕ್ಕೆ ಕಾರಣವಾಗಿದೆ. 2007ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸರ್ಕಾರಿ ಗೋಮಾಳಗಳ ಹರಾಜು ಪ್ರಕ್ರಿಯಲ್ಲಿ ಪ್ರಭಾವ ಬಳಸಿ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅಧ್ಯಕ್ಷರಾಗಿರುವ ಜನತಾ ಎಜುಕೇಷನ್ ಸೊಸೈಟಿ 2 ಕೋಟಿಗೆ ಹೆಚ್ಚಿನ ಬಿಡ್ ಮಾಡಿ ಜಮೀನು ಖರೀದಿ ಮಾಡಿತ್ತು. ಆದರೆ ಇದುವರೆಗೂ ಸ್ವಾಧೀನಕ್ಕೆ ಬಂದಿರುವುದಿಲ್ಲ. ಜಮೀನನ್ನು ಖುದ್ದು ಜಿಲ್ಲಾಡಳಿತ ಮುಂದೆ ನಿಂತು ಜಮೀನನ್ನು ಸೊಸೈಟಿಗೆ ಗುರುತಿಸಿ ನೀಡಿರುತ್ತಾರೆ. ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನಕ್ಕೆ ಮುಂದಾದ ವೇಳೆ ಜಮೀನು ಅನುಭವದಲ್ಲಿದ್ದ ರೈತರು ತಡೆದಿದ್ದಾರೆ.