ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಗತ್ಯ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಮಾಜಿಕ ಸೇವೆಗಳ ಅಗತ್ಯವಿರುವುದನ್ನು ಮನಗಂಡಿರುವ ಲಾರ್ಸನ್ ಆ್ಯಂಡ್ ಟಾಬ್ರೋ ಕಂಪನಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕಂಪನಿಯ ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ.ತಿಳಿಸಿದರು.
ಲಯನ್ಸ್ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯ - ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ
ದೊಡ್ಡಬಳ್ಳಾಪುರದ ಎಪಿಎಂಸಿ ಎದುರಿಗಿರುವ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಲಾರ್ಸನ್ ಆ್ಯಂಡ್ ಟಾಬ್ರೋ ಕಂಪನಿ ನಿರ್ಮಿಸಿರುವ ಲಯನ್ಸ್ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ. ಉದ್ಘಾಟಿಸಿದರು.
![ಲಯನ್ಸ್ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯ Low-cost dialysis facility for poor patients at Lyons Health Center](https://etvbharatimages.akamaized.net/etvbharat/prod-images/768-512-8619982-thumbnail-3x2-soumyacopy.jpg)
ನಗರದ ಎಪಿಎಂಸಿ ಎದುರಿಗಿರುವ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಲಾರ್ಸನ್ ಆ್ಯಂಡ್ ಟಾಬ್ರೋ ಕಂಪನಿ ನಿರ್ಮಿಸಿರುವ ಲಯನ್ಸ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಗಳಿಸಿದ ಸಂಪತ್ತಿನಲ್ಲಿ ಸಮಾಜ ಸೇವೆಗೆ ಮೀಸಲಿಡುವುದು ಅಗತ್ಯವಾಗಿದ್ದು, ಸೇವೆಯನ್ನು ಪಡೆದುಕೊಂಡವರು ಸಹ ಸಮಾಜಕ್ಕೆ ಋಣಿಯಾಗಿರಬೇಕು. ಲಯನ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು, ಡಯಾಲಿಸಿಸ್ ಸೇವೆಗಳು ಶ್ಲಾಘನೀಯವಾಗಿವೆ. ಮುಂದೆಯೂ ಇಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಮ್ಮ ಕಂಪನಿಯ ಸಹಕಾರವಿದೆ ಎಂದು ತಿಳಿಸಿದರು.
ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಲಯನ್ ಚಾರಿಟೀಸ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಒಂದು ಬಾರಿಯ ಡಯಾಲಿಸಿಸ್‌ಗೆ 1,500 ಖರ್ಚು ಬರುತ್ತಿದ್ದು, ಲಯನ್ಸ್ ಸಂಸ್ಥೆ ಅರ್ಧ ಖರ್ಚು ಭರಿಸುತ್ತಿದೆ. ಈ ದಿಸೆಯಲ್ಲಿ ಬಡವರಿಗೆ ಉಚಿತವಾಗಿ ರಿಯಾಯಿತಿ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಒಂದು ಕೋಟಿ ರೂಪಾಯಿಗಳ ನಿಧಿ ಸಂಗ್ರಹ ಮಾಡಿ ಅದರಿಂದ ಬರುವ ಬಡ್ಡಿ ಹಣವನ್ನು ಬಡವರ ಚಿಕಿತ್ಸೆಗೆ ಬಳಸಿಕೊಳ್ಳಲು ಯೋಜನೆ ಹೊಂದಲಾಗಿದೆ. ಈಗಾಗಲೇ ಹಲವಾರು ದಾನಿಗಳು ನೀಡಿದ್ದು, ಇಚ್ಛೆಯುಳ್ಳವರು ಲಯನ್ಸ್ ಸಂಸ್ಥೆಗೆ ದೇಣಿಗೆ ನೀಡಬಹುದಾಗಿದೆ ಎಂದರು.