ದೊಡ್ಡಬಳ್ಳಾಪುರ: ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರದ ಟಿ.ಬಿ. ನಾರಾಯಣಪ್ಪ ಬಡಾವಣೆಯಲ್ಲಿರುವ ಕಿತ್ತನಹಳ್ಳಿ ಪಿಡಿಒ ರಂಗಸ್ವಾಮಿ ಎಂಬುವರ ಅವರ ನಿವಾಸ, ವಾಣಿಜ್ಯ ಸಂಕೀರ್ಣ, ಪಾಲನಜೋಗಹಳ್ಳಿಯ ನಿವಾಸಗಳ ಮೇಲೂ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದಲ್ಲದೇ ಸ್ವಂತ ಊರಾದ ತೂಬಗೆರೆ ಹೋಬಳಿಯ ಸೋತೇನಹಳ್ಳಿ ಗ್ರಾಮದ ನಿವಾಸ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿಯ ಜಮೀನು ಸೇರಿದಂತೆ ಹಲವೆಡೆ ಪೊಲೀಸರು ದಾಳಿ ಮಾಡಿದ್ದಾರೆ.
ಸುಮಾರು 20 ಅಧಿಕಾರಿಗಳ ತಂಡ ಅವರ ನಿವಾಸ ಮತ್ತು ಇತರಡೆ ಅದಾಯಕ್ಕಿಂತ ಹೆಚ್ಚು ಆಸ್ತಿ ಹಾಗೂ ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿದ್ದಾರೆ. ಪರಿಶೀಲನೆ ವೇಳೆ ತೂಬಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 28 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ.
ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆಯಿಂದಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಲವು ಅಧಿಕಾರಿಗಳ ನಿವಾಸಗಳ ಮೇಲೆ ರೇಡ್ ಮಾಡಿ ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಇಬ್ಬರು ಇಂಜಿನಿಯರ್ಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ತುಂಗಾ ಮೇಲ್ದಂಡೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ಶಂಕರ್ ನಾಯ್ಕ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.
ಶಿವಮೊಗ್ಗದ ಡಿವೈಎಸ್ಪಿ ಈಶ್ವರ್ ಉಮೇಶ್ ನಾಯಕ್ ಹಾಗೂ ಲೋಕಾಯುಕ್ತ ಸಿಪಿಐ ಮೃತ್ಯುಂಜಯ ಅವರ ತಂಡ ಒಟ್ಟು ಎಂಟು ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಇಬ್ಬರು ಇಂಜಿನಿಯರ್ಗಳ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಬೆಳ್ಳಿ, ಐಷಾರಾಮಿ ಕಾರುಗಳು ಪತ್ತೆಯಾಗಿದೆ.
ಮೈಸೂರಿನಲ್ಲಿ ನಾಲ್ಕು ಜನ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಶೊಧಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಮಹೇಶ್ ಕುಮಾರ್, ನಂಜನಗೂಡಿನ ಸಬ್ ರಿಜಿಸ್ಟರ್ ಶಿವಶಂಕರ ಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ನಾಗೇಶ್ ಹಾಗೂ ಮುಖ್ಯ ಲೆಕ್ಕಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ಇದನ್ನೂ ಓದಿ:ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ