ಮಹದೇವಪುರ: ಲಾಕ್ಡೌನ್ ಹಿನ್ನೆಲೆಯಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ಮನೆ ಖಾಲಿ ಮಾಡಿಕೊಂಡು ತಮ್ಮ ಸ್ವಂತ ಊರುಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಹತ್ತಾರು ವರ್ಷಗಳ ಕಾಲ ಮಹದೇವಪುರದ ಸುತ್ತಮುತ್ತಲಿನ ಗ್ರಾಮದಲ್ಲಿ ವಾಸವಾಗಿದ್ದ ನೂರಾರು ಕುಟುಂಬಗಳು ಇಂದು ಅನೇಕ ಕಂಪನಿಗಳು ಲಾಕ್ಡೌನ್ನಿಂದ ಮುಚ್ಚಿರುವ ಕಾರಣ, ಕಳೆದ ಮೂರು ತಿಂಗಳ ಕಾಲ ಕೆಲಸವಿಲ್ಲದೇ ಪರದಾಡುತ್ತಿದ್ದ ಕಾರ್ಮಿಕರು ಬೆಂಗಳೂರನ್ನು ತೊರೆಯಲು ಕಾರಣವಾಗಿದೆ.
ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿ ಬಂದವರಿಗೆ ಕೆಲಸ ನೀಡಿ ಆರ್ಥಿಕವಾಗಿ ಬೆಳೆಯಲು ನೆಲೆಯಾಗಿದ್ದ ಬೆಂಗಳೂರು ಬಗ್ಗೆ, ಸದ್ಯ ಕೊರೊನಾ ಅಟ್ಟಹಾಸದಿಂದ ಯಾರಿಗೂ ಅದರ ಸಹವಾಸ ಬೇಡ ಎನ್ನುವಂತಾಗಿದೆ.
ಮನೆ ಬಾಡಿಗೆ ಕಟ್ಟಿಕೊಂಡು, ಲಾಕ್ಡೌನ್ನಿಂದ ಕೆಲಸ ಇಲ್ಲದೇ, ಇತ್ತ ಮಕ್ಕಳಿಗೆ ಶಾಲೆಯೂ ಇಲ್ಲದೇ ಮನೆಯಲ್ಲಿದ್ದವರು ಸದ್ಯ ಊರಿನ ದಾರಿ ಹಿಡಿದಿದ್ದಾರೆ. ಮತ್ತೆ ಲಾಕ್ಡೌನ್ ಘೋಷಣೆ ಆಗಿದ್ದೇ ತಡ ಇಂದು ನೂರಾರು ಕುಟುಂಬಗಳು ಗಂಟು ಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿವೆ.
ನಮಗೆ ಬೆಂಗಳೂರಿನ ಸಹವಾಸವೇ ಬೇಡ . ಪ್ರತಿ ತಿಂಗಳ ಬಾಡಿಗೆ ಕಟ್ಟೋಕೆ ಆಗ್ತಿಲ್ಲ, ಮಕ್ಕಳಿಗೆ ಸ್ಕೂಲ್ ಕೂಡ ಇಲ್ಲ, ಇರೋ ಕೆಲಸ ಕೂಡ ಹೋಯ್ತು, ಏನ್ ಮಾಡಬೇಕೋ ಗೊತ್ತಾಗಿಲ್ಲ, ಊರಲ್ಲಿ ಕೂಲಿ ಕೆಲಸ ಮಾಡಿ ಜೀವನ ಮಾಡಿಕೊಂಡು ಬದುಕಬಹುದು, ಹೇಗೊ ಊರಿನಲ್ಲಿ ಅಲ್ಪ ಸ್ವಲ್ಪ ಜಮೀನಿದೆ. ದೇವರ ದಯೆ ಮಳೆ ಆಗ್ತಿದೆ, ಕೃಷಿ ಮಾಡ್ತಾ ಜೀವನ ಸಾಗಿಸಬಹುದು. ಇದು ನೊಂದವರ ಹಾಗೂ ಕೆಲಸ ಕಳೆದುಕೊಂಡವರ ಮಾತಾಗಿದೆ.
ಕೊರೊನಾ ಮಹಾಮಾರಿ ಬೆಂಗಳೂರಿನಲ್ಲಿ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯನ್ನು ಬಿಟ್ಟು ಮನೆ ಖಾಲಿ ಮಾಡಿಕೊಂಡು ಸಾವಿರಾರು ಜನರು ಪಾತ್ರೆ, ಪಗಡೆ ಸಮೇತ ಮನೆಗಳನ್ನು ಖಾಲಿ ಮಾಡಿಕೊಂಡು ಬೆಂಗಳೂರು ತೊರೆದಿದ್ದಾರೆ. ಕೆಲವರು ತಾತ್ಕಾಲಿಕವಾಗಿ ಊರು ಬಿಟ್ಟರೆ ಇನ್ನೂ ಅನೇಕರು ವಾಹನದಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ಶಾಶ್ವತವಾಗಿ ಹಿಂದಿರುಗುತ್ತಿದ್ದಾರೆ.
ಐಟಿ ಬಿಟಿ ಕ್ಷೇತ್ರದಲ್ಲಿ ಲಾಕ್ಡೌನ್ ಘೊಷಣೆ ಆಗುತ್ತಿದ್ದಂತೆಯೇ ಶಾಶ್ವತವಾಗಿ ಬೆಂಗಳೂರು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ತಾವು ನೀಡಿದ್ದ ಮುಂಗಡದ ಪಾವತಿಯಲ್ಲಿ ಮೂರ್ನಾಲ್ಕು ತಿಂಗಳ ಬಾಡಿಗೆ ಕಟ್ಟಿ ಉಳಿದ ಹಣ ವಾಪಸ್ ಪಡೆದುಕೊಂಡು ಮನೆಯಲ್ಲಿದ್ದ ಸಾಮಗ್ರಿಗಳನ್ನು ವಾಹನಗಳಲ್ಲಿ ತುಂಬಿ ಕೊಂಡು ಊರುಗಳತ್ತ ಹೋಗುತ್ತಿದ್ದಾರೆ. ಕೆಲವರು ಆಷಾಢ ಮುಗಿಯುವ ಮೊದಲೇ ಮನೆ ಖಾಲಿ ಮಾಡುತ್ತಿದ್ದು, ಮನೆ ಮಾಲೀಕರು ಕಂಗಲಾಗಿದ್ದಾರೆ.