ನೆಲಮಂಗಲ/ತುಮಕೂರು: ತಾಲೂಕಿನಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷವಾಗುತ್ತಿದೆ. ಮನೆಗಳ ಮುಂದೆ ಕಟ್ಟಿದ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಚಿರತೆಯ ಚಲನವಲನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಮತ್ತೆ ಕಾರಿನಲ್ಲಿ ಚಲಿಸುತ್ತಿದ್ದಾಗ ಚಿರತೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನಗರಕ್ಕೆ ಲಗ್ಗೆ ಇಡುವ ಆತಂಕ ಎದುರಾಗಿದೆ.
ನೆಲಮಂಗಲ ತಾಲೂಕಿನ ಭೂಸಂದ್ರ, ಕಾಡುಕರೇನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು. ಅಲ್ಲದೇ ಮನೆ ಮುಂದೆ ಕಟ್ಟಿದ್ದ ನಾಯಿಯೊಂದಕ್ಕೆ ಹೊಂಚು ಹಾಕಿ ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದಾದ ಬಳಿಕ ಚಿರತೆ ಸೆರೆಗೆ ಹಲವು ಗ್ರಾಮಗಳ ಗ್ರಾಮಸ್ಥರ ಆಗ್ರಹ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‌ಗಳನ್ನು ಇರಿಸಿದ್ದರು. ಆದರೆ ಈವರೆಗೂ ಒಂದೇ ಒಂದು ಚಿರತೆ ಕೂಡ ಬೋನ್‌ಗೆ ಬಿದ್ದಿಲ್ಲ. ಈಗ ನೆಲಮಂಗಲ ನಗರದ ಕೆಂಪಲಿಂಗಹಳ್ಳಿ ಸಮೀಪದ ದೇವಾಂಗ ಮಠದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಕಾರಿನಲ್ಲಿ ಚಲಿಸುತ್ತಿದ್ದಾಗ ಸ್ಥಳೀಯರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಚಿಕನ್ ಶಾಪ್‌ಗಳ ತ್ಯಾಜವನ್ನು ನೆಲಮಂಗಲ ಹೊರವಲಯದಲ್ಲಿ ಎಲ್ಲೆಂದರಲ್ಲಿ ಎಸೆಯುತಿದ್ದಾರೆ. ಹೀಗಾಗಿ ಇದನ್ನು ತಿನ್ನಲು ನಾಯಿಗಳು ಬರುತ್ತಿವೆ. ನಾಯಿಗಳನ್ನು ಅರಸಿ ಬೇಟೆಯಾಡಲು ಗ್ರಾಮೀಣ ಪ್ರದೇಶಕ್ಕೆ ಹೋಗುತ್ತಿದ್ದ ಚಿರತೆಗಳು ಈಗ ನಗರದತ್ತ ಮುಖ ಮಾಡಿವೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸ್ಥಳೀಯರಾದ ರುದ್ರೇಶ್ ಮನವಿ ಮಾಡಿದರು.