ದೇವನಹಳ್ಳಿ: ಬೆಂಗಳೂರು ಗ್ರಾಂ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ರೈತರು, ಬೆಳೆ ಸಮೀಕ್ಷೆ ಆ್ಯಪ್ ಬಳಸುವ ಮೂಲಕ ಜಮೀನಿನ ಸರ್ವೇ ನಂಬರ್ ಹಾಗೂ ಬೆಳೆಯ ವಿವರವನ್ನು ದಾಖಲಿಸಬೇಕು. ಸಮೀಕ್ಷೆ ಮಾಡಿಸದಿದ್ದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ನಡೆದ "ರೈತರ ಬೆಳೆ ಸಮೀಕ್ಷೆ-2020" ಕುರಿತ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟಾರೆ 4,47,664 ಪ್ಲಾಟ್‌ಗಳನ್ನು ಸಮೀಕ್ಷೆ ಮಾಡಬೇಕಿದ್ದು, ಇದುವರೆಗೂ 98,613 ಪ್ಲಾಟ್‌ಗಳ 94,393(ಶೇ.18 ರಷ್ಟು) ರೈತರು ಬೆಳೆ ಸಮೀಕ್ಷೆ ಆ್ಯಪ್ ಬಳಸಿ ಬೆಳೆ ವಿವರವನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.