ದೊಡ್ಡಬಳ್ಳಾಪುರ:ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮನಸ್ತಾಪವಿದ್ದು, ನೀಲಗಿರಿ ತೋಪಿನಲ್ಲಿ ಮರಗಳನ್ನು ಕತ್ತರಿಸುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದ ಶ್ರೀನಿವಾಸ್ ಹಲ್ಲೆಗೊಳಗಾದ ವಿಶೇಷ ಚೇತನ ವ್ಯಕ್ತಿ. ಜೂನ್ 21ರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಶ್ರೀನಿವಾಸ್ ತಮ್ಮ ತಂದೆ ಮತ್ತು ತಂದೆಯ ತಂಗಿಯಿಂದ ಪಿತ್ರಾರ್ಜಿತವಾಗಿ ರಾಮೇಶ್ವರ ಗ್ರಾಮ ಸರ್ವೆ ನಂಬರ್ 160/1, 160/2, 160/ 3 ರಲ್ಲಿ ಒಟ್ಟು 22 ಎಕರೆ ಜಮೀನು ಹೊಂದಿದ್ದಾರೆ.
ಇದೇ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಕೃಷ್ಣಮೂರ್ತಿ, ಗೋವಿಂದರಾಜು, ವೆಂಕಟೇಶ, ನರಸಿಂಹಮೂರ್ತಿ, ನಾರಣಪ್ಪ, ಅಪ್ಪಯ್ಯರಾಜು, ಗೀತಾ, ಅನಸೂಯ, ಹೇಮಂತ, ಸಂತೋಷ, ಹನುಮಂತೇಗೌಡ ಎಂಬುವರು ತನ್ನ ಮೇಲೆ ನೀಲಿಗಿರಿ ದೊಣ್ಣೆ ಹಾಗೂ ಮಚ್ಚಿನಿಂದ ಹಲ್ಲೆ ಮಾಡಿ ಬಲಗೈ ಬೆರಳುಗಳನ್ನು ಮುರಿದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶ್ರೀನಿವಾಸ್ ದೂರಿದ್ದಾರೆ.