ದೇವನಹಳ್ಳಿ: ಕಾಂಗ್ರೆಸ್ ಮುಖಂಡನ ಜಮೀನಿಗೆ ಅಡ್ಡವಾಗಿ ಬಡಕುಟುಂಬವೊಂದರ ಜಮೀನು ಇದ್ದು, ಆ ಜಾಗವನ್ನು ಖಾಲಿ ಮಾಡಿಸುವಂತೆ ರೌಡಿಗಳನ್ನು ಕಳುಹಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನ್ಯಾಯ ಪರವಾಗಿರಬೇಕಾದ ಪೊಲೀಸರು ಸಹ ಮುಖಂಡನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ತೋಟದ ಮನೆಗಳ ಜಾಗದ ಬಳಿಯ ಸರ್ವೆ ನಂಬರ್ 112ರಲ್ಲಿರುವ 22 ಗುಂಟೆ ಜಾಗದಲ್ಲಿ ನಾರಾಯಣಮ್ಮ ಮತ್ತು ಮೋಟಪ್ಪ ದಂಪತಿ ವಾಸವಾಗಿದ್ದಾರೆ. ಹಸು ಸಾಕಾಣಿಕೆ ಮಾಡುತ್ತಿರುವ ಇವರ ಕುಟುಂಬ ಇದೇ 22 ಗುಂಟೆ ಜಾಗದಲ್ಲಿ ಮೇವು ಬೆಳೆದು ಜೀವನ ನಿರ್ವಹಣೆ ಮಾಡುತ್ತಿದೆ. ಅನೇಕ ವರ್ಷಗಳಿಂದ ಇದೇ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದು, ಶಿವಕುಮಾರ್ ಎಂಬುವರ ಕುಟುಂಬದಿಂದ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ.
ಸರ್ವೆ ನಂಬರ್ 112 ರ 22 ಗುಂಟೆ ಜಾಗದ ಸುತ್ತಲೂ ಕಾಂಗ್ರೆಸ್ ಮುಖಂಡ ಜಿ.ಎಸ್. ರಾಮಚಂದ್ರಪ್ಪ ಅವರ ನಾಲ್ಕೈದು ಎಕರೆ ಜಮೀನು ಇದ್ದು, ಇವರ ಜಮೀನಿಗೆ ರಸ್ತೆ ಮಾಡಿಸಲು ನಾರಾಯಣಮ್ಮ ಅವರ 22 ಗುಂಟೆ ಜಮೀನು ಅಡ್ಡವಾಗಿದೆ. ಈ ಜಮೀನು ಕಬಳಿಸುವ ಕಾರಣಕ್ಕೆ ನಾರಾಯಣಮ್ಮರೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದ ಶಿವಕುಮಾರ್ ಈಗ ರಾಮಚಂದ್ರಪ್ಪ ಅವರ ಪರ ನಿಂತಿದ್ದು, ಜಮೀನು ಅವರಿಗೆ ಮಾರಾಟ ಮಾಡಿದ್ದಾನಂತೆ. ನಾರಾಯಣಮ್ಮ ಕುಟುಂಬವನ್ನು ಜಮೀನಿದಿಂದ ಓಡಿಸಲು ರೌಡಿಗಳನ್ನ ಕರೆಸಿ ಕೊಲೆ ಬೆದರಿಕೆ ಹಾಕಿ ಜಮೀನು ಖಾಲಿ ಮಾಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.