ಬೆಂಗಳೂರು: ಕೆರೆಗೆ ಕಟ್ಟಡಗಳ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಸುರಿಯುದಂತೆ ಅಧಿಕಾರಿಗಳು ಫಲಕವನ್ನು ಅಳವಡಿಸಿದ್ದಾರೆ. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನರು ತ್ಯಾಜ್ಯವನ್ನು ತಂದು ಸುರಿಯುತ್ತಲೇ ಇದ್ದಾರೆ, ಜನರ ಜೀವನಾಡಿಗಳಾಗಿದ್ದ ಕೆರೆ ಬತ್ತಿಹೋಗಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನ ಕೆರೆಗಳನ್ನು ಹಾಳುಗೆಡವುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳು ಕಣ್ಣೆದುರೇ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಈ ಅವ್ಯವಸ್ತೆ ತಾಂಡವವಾಡುತ್ತಿದ್ದು, ಈ ಕೆರೆಯು ಬೆಂಗಳೂರು ಅಂತರಾಷ್ಟ್ರೀಯ ವಿಮಾನಯಾನದ ಅಧೀನಕ್ಕೆ ಒಳ ಪಡುತ್ತದೆ.
ತ್ಯಾಜ್ಯವನ್ನು ಹಾಕಿದರೆ ನಿಯಮ 1937 ಕಲಂ 91 ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಎಚ್ಚರಿಗೆ ನೀಡಿದ್ದರೂ ಸಹ ಇಲ್ಲಿನ ನಿವಾಸಿಗಳು ಮಾತ್ರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬೇಸಿಗೆ ಇರುವುದರಿಂದ ಕೆರೆಯಲ್ಲಿ ನೀರೆಲ್ಲಾ ಬತ್ತಿ ಹೋಗಿದೆ. ಈ ಹಿನ್ನೆಲೆ ಕೆರೆಗೆ ಮಾಂಸದ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ಸುರಿಯುತ್ತಿದ್ದಾರೆ.
ಸುಮಾರು 80 ಎಕರೆಗೂ ಹೆಚ್ಚಿನ ವಿಸ್ತೀರ್ಣಹೊಂದಿರುವ ಈ ಕೆರೆ, ಈ ಹಿಂದೆ ಹತ್ತಾರು ಹಳ್ಳಿಗಳಿಗೆ ಜೀವನಾಡಿಯಾಗಿತ್ತು, ಕೆರೆ ತುಂಬಿದ್ದಾಗ ಎಲ್ಲಾ ಬೋರ್ವೆಲ್ ಗಳಲ್ಲಿ ನೀರು ಬರುತ್ತಿತ್ತು. ಜನ ಕೃಷಿ ಚಟುವಟಿಕೆಗಳನ್ನ ನಡೆಸಿ ಜೀವನ ಸಾಗಿಸುತ್ತಿದ್ದರು. ಆದರೆ ನೀರು ಖಾಲಿಯಾದಂತೆ ಜನರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಮತ್ತೊಂದೆಡೆಇದೇ ಜನರು ಈ ಕೆರೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.