ದೇವನಹಳ್ಳಿ : ಕೇಂದ್ರ ಸರ್ಕಾರ ಇರೋದು ಕೇವಲ ಶ್ರೀಮಂತರಿಗೆ ಎಂದು ಮಾಜಿ ಸಿಎಂ ಹೆಚ್ಡಿಕೆ ಆರೋಪಿಸಿದ್ದಾರೆ. ಉದ್ಯಮಿಗಳ 68 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲವನ್ನೂ ಮನ್ನಾ ಮಾಡಲೆಂದು ಸವಾಲು ಹಾಕಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಪರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಉದ್ಘಾಟನೆಗಾಗಿ ಕುಮಾರಸ್ವಾಮಿ ದೇವನಹಳ್ಳಿ ಪಟ್ಟಣಕ್ಕೆ ಆಗಮಸಿದ್ದರು. ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ 35 ಸಾವಿರ ದಿನಸಿ ಕಿಟ್, 50 ಸಾವಿರ ಮಾಸ್ಕ್ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಾಕ್‌ಡೌನ್ ಜಾರಿಯಿಂದ ತೋಟಗಾರಿಕೆ ಬೆಳೆಗಾರರು ಸಾಯುವ ಸ್ಥಿತಿಯಲ್ಲಿದ್ದಾರೆ. ದ್ರಾಕ್ಷಿ, ಟೊಮ್ಯಾಟೊ,ಕಲ್ಲಂಗಡಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳ ಸಭೆ ಕರೆದಿದ್ದಾಗ ತೋಟಗಾರಿಕೆ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ತೋಟಗಾರಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು 450 ಕೋಟಿ ಪ್ಯಾಕೇಜ್ ಬಿಡುಗಡೆ ಮನವಿ ಮಾಡಿದ್ದರು. ಆದರೆ, ಸರ್ಕಾರ ಈ ವರದಿಯನ್ನ ಕಸದ ಬುಟ್ಟಿಗೆ ಎಸೆದಿದೆ. ಸರ್ಕಾರದ ನಡೆಯ ಬಗ್ಗೆ ನನಗೆ ಅಸಮಾಧಾನವಿದೆ ಎಂದ್ರು.
ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂಥ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ತೋರ್ಪಡಿಕೆಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆಯೆಂದು ವಾಗ್ಧಾಳಿ ನಡೆಸಿದರು. ಅಲ್ಲದೆ ಕೋಲಾರದಲ್ಲಿ ರೈತರು ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಾಗಿಸುವಾಗ ಟೋಲ್ ಸಿಬ್ಬಂದಿ ರೈತರಿಗೆ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಆದರೆ, ಸರ್ಕಾರ ಮಾತ್ರ ಟೋಲ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು. ರಾಜ್ಯದಲ್ಲಿ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ಪ್ರಾರಂಭವಾಗಿದೆ.
ಸರ್ಕಾರಕ್ಕೆ ಆರ್ಥಿಕ ಪೆಟ್ಟು ಬಿದ್ದಿದೆ. ಆರ್ಥಿಕ ಚೇತರಿಕೆಗೆ ಸರ್ಕಾರ ಕ್ರಮತೆಗೆದುಕೊಳ್ಳಬೇಕಿದೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಲಾಕ್‌ಡೌನ್ ಸಡಿಲಿಕೆ ಮಾಡಬೇಕು. ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಟೆಸ್ಟ್ ಆಗಿಲ್ಲ, 45 ದಿನ ರಾಜ್ಯದ ಜನ ಶ್ರಮ ಪಟ್ಟಿದ್ದೇವೆ. ಇದನ್ನು ಸರ್ಕಾರ ಮಣ್ಣು ಪಾಲಾಗಲು ಬಿಡದಂತೆ ಎಚ್ಚರಿಕೆ ವಹಿಸಬೇಕೆಂದರು.
ಉದ್ಯಮಿಗಳ 68 ಸಾವಿರ ಸಾಲಮನ್ನಾ ವಿರುದ್ಧ ವಾಗ್ದಾಳಿ :ಕೇಂದ್ರ ಸರ್ಕಾರ ಇರುವುದೇ ದೊಡ್ಡ ಉದ್ಯಮಿಗಳಿಗೆ, ಉದ್ಯಮಿಗಳ 68 ಸಾವಿರ ಕೋಟಿ ಸಾಲ ಮನ್ನಾ ಮಾಡಿಲ್ಲ. ರೈಟ್ ಆಫ್ ಮಾಡ್ಡಿದ್ದೇವೆ ಅಂತಾರೆ, ಸಾಲವನ್ನು ಮುಂದೂಡಿದ್ದೇವೆ ಅನ್ನುತ್ತಿರುವ ಕೇಂದ್ರ ಸರ್ಕಾರ ಕಡತದಲ್ಲಿ ಸಾಲವನ್ನ ತೆಗೆದ ಮೇಲೆ 68 ಸಾವಿರ ಕೋಟಿ ಹಣವನ್ನ ಎಲ್ಲಿಂದ ವಸೂಲಿ ಮಾಡ್ತಾರೆ, ಬಾಬಾರಾಮ್ ದೇವ್, ಅಂಬಾನಿ ಇಂಥವರ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ರೈತರ ಸಾಲವನ್ನೂ ರೈಟ್ ಆಫ್ ಮಾಡಿಲೆಂದು ಸವಾಲು ಎಸೆದರು.