ದೊಡ್ಡಬಳ್ಳಾಪುರ : ವಯಸ್ಸಿನ್ನೂ 32 ವರ್ಷ. ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಮಗ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲೇಬೇಕಾದ ಸಂಕಷ್ಟ ಇಡೀ ಕುಟುಂಬವನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣದ ವಿನಾಯಕನಗರದ ಅಂಜನೇಯಲು ಮತ್ತು ಶಾಂತಮ್ಮನವರ ಒಬ್ಬನೇ ಮಗ ನರೇಶ್ ಕಿಡ್ನಿ ಫೇಲ್ಯೂರ್ನಿಂದ ಬಳಲುತ್ತಿರುವವರು.
10 ವರ್ಷಗಳ ಹಿಂದೆ ಮದುವೆಯಾಗಿರುವ ನರೇಶ್ಗೆ 7 ವರ್ಷದ ಮಗನಿದ್ದಾನೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಾ ಇಡೀ ಕುಟುಂಬ ಜವಾಬ್ದಾರಿ ತನ್ನ ಹೆಗಲಿಗೆ ಹಾಕೊಂಡಿದ್ದನು. ಆದರೆ, ಇದೀಗ ಆ ಕುಟುಂಬದ ಸಂತೋಷವನ್ನು ನರೇಶ್ ಅನಾರೋಗ್ಯ ಕಿತ್ತುಕೊಂಡಿದೆ. ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ನರೇಶ್ ಸ್ಥಿತಿ ನೋಡಿ ಇವತ್ತು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ.
ಮಗನ ಜೀವ ಉಳಿಸಲು ತಾಯಿ ಪಾರ್ವತಮ್ಮ ತಮ್ಮ ಕಿಡ್ನಿ ಕೊಡಲು ಮುಂದಾಗಿದ್ದಾರೆ. ತಾಯಿ ಕಿಡ್ನಿ ಮಗನಿಗೆ ಮ್ಯಾಚ್ ಆಗಿದೆ. ಆದರೆ, ಕಿಡ್ನಿ ಬದಲಾವಣೆ ಆಪರೇಷನ್ಗಾಗಿ ₹9 ಲಕ್ಷ ಹಣ ಬೇಕಿದೆ. ಮನೆಯ ಸ್ಥಿತಿಯನ್ನು ನೋಡಲಾಗದೆ ನರೇಶ್ ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಾರೆ. ಆಕೆಗೆ ಬರುವ 9 ಸಾವಿರದಲ್ಲಿ ಸಂಸಾರ ನಡೆಯಬೇಕು. ಇದರ ಜೊತೆಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕು.