ಘಾಟಿ ಸುಬ್ರಮಣ್ಯಸ್ವಾಮಿಗೆ 1001 ಈಡುಗಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) :ಈ ಬಾರಿಯ ವಿಧಾನಸಭಾಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಗೆಲುವಿಗಾಗಿ ಕಾಂಗ್ರೆಸ್ ಕಾರ್ಯಕರ್ತ ಘಾಟಿ ಸುಬ್ರಮಣ್ಯಸ್ವಾಮಿಗೆ ಹರಕೆ ಹೊತ್ತಿದ್ದರು. ಕೆ.ಹೆಚ್. ಮುನಿಯಪ್ಪ ಜಯಭೇರಿ ಬಾರಿಸಿದ ಹಿನ್ನೆಲೆ ಘಾಟಿ ಸನ್ನಿಧಿಯಲ್ಲಿ 1001 ಈಡುಗಾಯಿ ಹೊಡೆದ ಹರಕೆ ತೀರಿಸುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಹೆಚ್. ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಸ್ವರ್ಥಿಸುತ್ತಾರೆಂಬ ಸುದ್ದಿ ಕೇಳಿದ ತಕ್ಷಣ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಇದನ್ನೂ ಓದಿ :ಡಿಕೆಶಿ, ಸಿದ್ದರಾಮಯ್ಯ ಜೊತೆ ಖರ್ಗೆ ಚರ್ಚೆ; ನಾಳೆ ನೂತನ ಸಿಎಂ ಘೋಷಣೆ ಸಾಧ್ಯತೆ..
ಈ ವೇಳೆ ಮಾತನಾಡಿದ ಹರಕೆ ಹೊತ್ತ ಕಾರ್ಯಕರ್ತ ಪ್ರಸಾದ್ ಎಂಬುವವರು ಕೆ.ಹೆಚ್. ಮುನಿಯಪ್ಪರ ಮೇಲಿನ ಅಭಿಮಾನದಿಂದ ಅವರ ಗೆಲುವಿಗಾಗಿ ದೇವರಿಗೆ ಹರಕೆ ಕಟ್ಟಿದ್ದೆ. ಇದೀಗ ಅವರು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಹೀಗಾಗಿ ಹರಕೆಯ ಫಲ ಫಲಿಸಿದ ಹಿನ್ನೆಲೆ ಇಂದು ಘಾಟಿ ಸನ್ನಿಧಿಯಲ್ಲಿ 1001 ಈಡುಗಾಯಿ ಒಡೆದು ಹರಕೆ ತೀರಿಸಿದ್ದೇವೆ ಎಂದು ಹೇಳಿದರು.
ಕೆ.ಹೆಚ್. ಮುನಿಯಪ್ಪ ಮುಖ್ಯಮಂತ್ರಿ ಮಾಡಲು ಒತ್ತಾಯ :ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಜನ ದಲಿತರಿದ್ದು, ಮುಂದುವರಿದ ಹಲವಾರು ಸಮುದಾಯಗಳು ಮತ್ತು ತೀರ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯಗಳಿಗೂ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು, ರಾಜ್ಯದ ಜನಸಂಖ್ಯೆಯ ಶೇ.25ರಷ್ಟು ಇರುವ ದಲಿತ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷ ಕೆ.ಹೆಚ್. ಮುನಿಯಪ್ಪ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನವನ್ನು ನೀಡುವುದರ ಮೂಲಕ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಮುಖಂಡ ರಾಮಕೃಷ್ಣಪ್ಪ ಅವರು ಒತ್ತಾಯಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಯಾವುದೇ ಜನಪ್ರತಿನಿಧಿಗಳಿಗೂ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಲ್ಲ. ಈ ಬಾರಿ ಕೆ. ಹೆಚ್. ಮುನಿಯಪ್ಪ ವಿಜಯ ಸಾಧಿಸಿರುವುದರಿಂದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದ್ದು, ಕ್ಷೇತ್ರಕ್ಕೆ ಮೊದಲ ಬಾರಿ ಸಚಿವ ಸ್ಥಾನ ಲಭಿಸುವ ಅವಕಾಶ ನಿಚ್ಚಳವಾಗಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ರಾಮಕೃಷ್ಣಪ್ಪ ಹೇಳಿದರು.
ಇದನ್ನೂ ಓದಿ :ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಪ್ರಮಾಣವಚನ ಸ್ವೀಕಾರ!
ಈ ವೇಳೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಮಾಜಿ ಶಾಸಕ ನರಸಿಂಹಸ್ವಾಮಿ, ಘಾಟಿ ಪಂಚಾಯ್ತಿ ಅಧ್ಯಕ್ಷೆ ಭಾರತೀಬಾಯಿ ಪ್ರಸಾದ್, ಮುಖಂಡರಾದ ಗೋಪಾಲನಾಯ್ಕ್, ಅರವಿಂದ್, ಕೃಷ್ಣನಾಯ್ಕ್, ಪ್ರಸಾದ್, ಶ್ರೀಧರ್, ವಸಂತಕುಮಾರ್, ಘಾಟಿ ಪಂಚಾಯ್ತಿ ಸದಸ್ಯ ಮುನಿರಾಜು ಇತರರು ಇದ್ದರು.
ಇದನ್ನೂ ಓದಿ :ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತ: ಹುಟ್ಟೂರಿನಲ್ಲಿ ಸಂಭ್ರಮ