ಕರ್ನಾಟಕ

karnataka

ETV Bharat / state

ನ.11ರಂದು ಪ್ರಧಾನಿಯಿಂದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ: ನಾಳೆಯಿಂದ ಮೃತ್ತಿಕಾ ಅಭಿಯಾನ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನ.11ರಂದು ಲೋಕಾರ್ಪಣೆಗೊಳಿಸುವರು ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Minister_Ashwatthanarayan press conference
ಸಚಿವ ಅಶ್ವತ್ಥನಾರಾಯಣ

By

Published : Oct 19, 2022, 5:16 PM IST

ಬೆಂಗಳೂರು:ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನ.11ರಂದು ಲೋಕಾರ್ಪಣೆಗೊಳಿಸುವರು. ಇದರ ಪ್ರಯುಕ್ತ ಅ.21ರಿಂದ ನ.7ರ ವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಸಿದ್ಧಗೊಳಿಸಿರುವ 20 'ನಾಡಪ್ರಭು ಕೆಂಪೇಗೌಡ ರಥ'ಗಳಿಗೆ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದೆದುರು ಚಾಲನೆ ನೀಡುವರು ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ರಥಗಳು ಆಯಾಯ ಪ್ರದೇಶ, ಜಿಲ್ಲೆಗಳನ್ನು ಪ್ರವೇಶಿಸುವಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು ಎಂದರು. ಅಭಿಯಾನ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಪುಣ್ಯಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುವುದು. ಪ್ರತಿಯೊಂದು ರಥದ ಮಾರ್ಗನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಆಯಾಯ ಜಿಲ್ಲೆಗಳಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡರ ಪ್ರತಿಮೆ "ಪ್ರಗತಿಯ ಪ್ರತಿಮೆ": ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ "ಪ್ರಗತಿಯ ಪ್ರತಿಮೆ" (STATUE OF PROSPERITY) ಎಂದು ಹೆಸರಿಡಲಾಗಿದೆ. ಪವಿತ್ರ ಮೃತ್ತಿಕೆಯನ್ನು ವಿಮಾನ ನಿಲ್ದಾಣ ಆವರಣದ 23 ಎಕರೆಯ ಕೆಂಪೇಗೌಡ ಥೀಮ್‌ ಪಾರ್ಕ್‌ನಲ್ಲಿ ಬಳಸಿಕೊಳ್ಳಲಾಗುವುದು. ನಿಲ್ದಾಣದ ಆವರಣದಲ್ಲಿ ಇಂಥ ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಅಭಿಯಾನ ಯಶಸ್ವಿಯಾಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಅಗತ್ಯ ಸಲಹೆಗಳನ್ನು ಕೊಡಲಾಗಿದೆ. ಇದಕ್ಕೆ ಜಿ.ಪಂ ಸಿಇಒಗಳು ನೋಡಲ್‌ ಅಧಿಕಾರಿಗಳಾಗಿರುತ್ತಾರೆ ಎಂದರು.

ವಿರೋಧ ಪಕ್ಷದವರಿಗೂ ಆಹ್ವಾನ: ವಿರೋಧ ಪಕ್ಷದ ನಾಯಕರಿಗೂ ಆಹ್ವಾನ ಮಾಡುತ್ತೇವೆ. ಸಿಎಂ ನೇತೃತ್ವದಲ್ಲಿ ಭೇಟಿಯಾಗಿ ಆಹ್ವಾನ ನೀಡುತ್ತೇವೆ. ಪ್ರೋಟೊಕಾಲ್ ಪ್ರಕಾರ ಎಲ್ಲರನ್ನೂ ಆಹ್ವಾನಿಸಲಾಗುವುದೆಂದರು.

ರಸ್ತೆ ಹಾಳಾಗಲು ಮಳೆ ಕಾರಣ​: ಬೆಂಗಳೂರಿನ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಬೆಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಾಲ್ಕು ವರ್ಷದಿಂದ ಸತತ ಮಳೆ, ವಾಹನ ದಟ್ಟನೆ ಕೂಡ ಹೆಚ್ಚಾಗಿದೆ. ಮಳೆಯಿಂದ ರಸ್ತೆ ಕೆಲಸ ‌ಮಾಡಲು ಆಗುತ್ತಿಲ್ಲ. ಹೀಗಾಗಿ ರಸ್ತೆಯಲ್ಲಿ ಗುಂಡಿ ಬೀಳುತ್ತಿವೆ. ಇನ್ನೊಂದೆಡೆ, ಬ್ರ್ಯಾಂಡ್ ಬೆಂಗಳೂರು ಹಾಳು‌ ಮಾಡುವ ಕೆಲಸ ಆಗುತ್ತಿದೆ. ಬೇರೆ ನಗರದಲ್ಲಿ ವರ್ಷಪೂರ್ತಿ ನೆರೆ ಇರುತ್ತದೆ. ಬೆಂಗಳೂರು ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಬೆಂಗಳೂರು ಹೆಸರು ಹಾಳು ಮಾಡುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಉಳಿಸುವ ಕೆಲಸ ಆಗಬೇಕು. ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಬದ್ಧವಿದೆ ಎಂದರು.

ಇದನ್ನೂ ಓದಿ:ವಿದೇಶಿ ಏರ್​ಪೋರ್ಟ್​ ಮೀರಿಸುವಂತಿದೆ ಕೆಐಎಎಲ್ ಟರ್ಮಿನಲ್-2.. ನ.11ರಂದು ಮೋದಿಯಿಂದ ಲೋಕಾರ್ಪಣೆ

ABOUT THE AUTHOR

...view details