ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ನುಗ್ಗಿದ ಕಳ್ಳರು ಬ್ಯಾಂಕಿನಲ್ಲಿ ಗ್ರಾಹಕರು ಅಡವಿಟ್ಟ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ನಡೆದು ಎರಡು ತಿಂಗಳು ಕಳೆದಿವೆ. ಆದರೆ, ಬ್ಯಾಂಕ್ ಸಿಬ್ಬಂದಿ ಯಾವುದೇ ಉತ್ತರ ನೀಡದ ಕಾರಣ ಗ್ರಾಹಕರು ಇಂದು ಬ್ಯಾಂಕ್ಗೆ ಇಂದು ಲಗ್ಗೆಯಿಟ್ಟಿದ್ದು, ಅಡವಿಟ್ಟಿರುವ ಒಡವೆಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದರು.
ಮೂವರು ಆರೋಪಿಗಳ ಬಂಧನ:ನ. 25 ರಂದು ಹೊಸಹಳ್ಳಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಳ ನುಗ್ಗಿದ್ದ ಕಳ್ಳರು 3.50 ಕೋಟಿ ಮೌಲ್ಯದ 12 ಕೆ.ಜಿ ಚಿನ್ನಾಭರಣ ಹಾಗೂ 14 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಘಟನೆ ಕುರಿತಂತೆ ಹೊಸಹಳ್ಳಿ ಸುತ್ತಮುತ್ತಲಿನ ಪ್ರದೇಶದ ಕೆಲ ಸಿಸಿ ಟಿವಿಗಳಲ್ಲಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಬೆನ್ನುಹತ್ತಿದ್ದ ಪೊಲೀಸರ ತಂಡ ಉತ್ತರ ಪ್ರದೇಶದ ಇಬ್ಬರು ಟ್ರಕ್ ಚಾಲಕರು ಹಾಗೂ ವಿಜಯಪುರದ ಓರ್ವ ಸೇರಿ ಮೂವರನ್ನು ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಗ್ರಾಹಕರು ಅಡವಿಟ್ಟಿರುವ ಒಡವೆಗಳನ್ನು ಹಿಂತಿರುಗಿಸುವಂತೆ ಬ್ಯಾಂಕಿಗೆ ಲಗ್ಗೆ ಇಟ್ಟಿರುವುದು ಬ್ಯಾಂಕ್ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಕುರಿತು ಮಾತನಾಡಿದ ಗ್ರಾಹಕರು, ಬ್ಯಾಂಕಿನಲ್ಲಿ ಕಳ್ಳತನ ನಡೆದು ಎರಡು ತಿಂಗಳು ಕಳೆದಿವೆ. ಆದರೆ, ಒಡವೆಗಳನ್ನು ಅಡವಿಟ್ಟಿದ್ದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ಉತ್ತರ ನೀಡುತ್ತಿಲ್ಲ. ನಮಗೆ ಹಣ ಹಿಂತಿರುಗಿಸುವರೋ ಇಲ್ಲವೆ ಒಡವೆಗಳನ್ನು ಹಿಂತಿರುಗಿಸುವರೋ ತಿಳಿಯದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಹಕರ ಒತ್ತಾಯಕ್ಕೆ ಮಣಿದ ಬ್ಯಾಂಕ್ ಸಿಬ್ಬಂದಿ ಮುಂದಿನ ಶುಕ್ರವಾರದ ಒಳಗಾಗಿ, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.