ನೆಲಮಂಗಲ:ತಾಲೂಕಿನ ತ್ಯಾಮಗೊಂಡ್ಲು ಮೂಲದ ಕಲಾವಿದ ಕೆ.ಸೋಮಶೇಖರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ರಚಿಸಿರುವ ನಾಡದೇವಿಯ ಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿ ಆದೇಶ ಹೊರಡಿಸಿದೆ.
ತಂದೆಯಿಂದ ಬಂದ ಬಳುವಳಿ:ಕೆ.ಸೋಮಶೇಖರ್ ಕಲಾವಿದ ಕುಟುಂಬದಿಂದ ಬಂದವರು. ಅವರ ತಂದೆ ದಿ.ಕೆಂಪಯ್ಯ ಶಿಕ್ಷಕರು. ಬಹುಮುಖ ಪ್ರತಿಭೆ ಹೊಂದಿದ್ದ ಅವರು ವಿಶಿಷ್ಠ ಕಲಾಕೃತಿ ರಚನೆಯಲ್ಲಿ ಸಿದ್ಧಹಸ್ತರು. ಗಣೇಶನ ಮೂರ್ತಿ ತಯಾರಿಕೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದರು. ತಂದೆಯಿಂದ ಬಳುವಳಿಯಾಗಿ ಬಂದಿದ್ದ ಚಿತ್ರಕಲೆಯನ್ನು ಕೆ.ಸೋಮಶೇಖರ್ ಬಾಲ್ಯದಿಂದ ಮೈಗೂಡಿಸಿಕೊಂಡು ಬಂದಿದ್ದಾರೆ.
ವೃತ್ತಿ ಜೀವನ: ತ್ಯಾಮಗೊಂಡ್ಲು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸೋಮಶೇಖರ್, ಮಕನಕುಪ್ಪೆ ತಿಮ್ಮೇಗೌಡ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಶಿಕ್ಷಣ ಪಡೆದರು. ನಂತರ ಶೇಷಾದ್ರಿಪುರಂ ಕೆನ್ ಕಲಾ ಶಾಲೆಯಲ್ಲಿ ಪದವಿ ಪಡೆದರು. ಬಾದಾಮಿ ಕಲಾ ಶಿಕ್ಷಕ ರಾಮಪ್ಪ ಭೀಮಪ್ಪ ಹಡಪದ್ ಮಾರ್ಗದರ್ಶನದಲ್ಲಿ ಕಲೆ ಕರಗತ ಮಾಡಿಕೊಂಡರು. ಕಲೆಯಲ್ಲಿ ವೃತ್ತಿ ಆರಂಭಿಸಿ, ಪ್ರಾರಂಭದಲ್ಲಿ ಸಾಹಿತಿಗಳ ಪುಸ್ತಕಗಳಿಗೆ ಮುಖಪುಟ ರಚನೆ, ವಾರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಥೆಗಳಿಗೆ ಚಿತ್ರ ಬರೆಯುತ್ತಿದ್ದರು. ಮೈಸೂರು, ಹೊಯ್ಸಳ ಶೈಲಿ, ಪೇಪರ್ ಕಟಿಂಗ್ ಮತ್ತು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ಪರಿಣಿತಿ ಸಾಧಿಸಿದ್ದರು.