ಮೋದಿಯವರು ಈ ರಾಷ್ಟ್ರದ ಪ್ರಧಾನ ಮಂತ್ರಿ ಗೌರವವನ್ನು ಕೆಳಮಟ್ಟಕ್ಕೆ ತಂದಿದ್ದಾರೆ : ಕೆ ಹೆಚ್ ಮುನಿಯಪ್ಪ ದೊಡ್ಡಬಳ್ಳಾಪುರ :ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೆ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ದುರಂತ. ಈ ಮೂಲಕ ಮೋದಿಯವರು ಈ ರಾಷ್ಟ್ರದ ಪ್ರಧಾನಮಂತ್ರಿ ಗೌರವವನ್ನು ಕೆಳಮಟ್ಟಕ್ಕೆ ತಂದಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಹೆಚ್. ಮುನಿಯಪ್ಪ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಹೈಸ್ಕೂಲ್ ಓದುವಾಗ ಪಂಡಿತ್ ಜವಾಹರ್ ಲಾಲ್ ಅವರನ್ನು ನೋಡಿದ್ದೆ. 1964 ರಲ್ಲಿ ಓಮ್ಮೆ ಮಾತ್ರ ಬಂದಿದ್ದರು. ಚಿಕ್ಕ ಬಳ್ಳಾಪುರಕ್ಕೆ ಬಂದಿದ್ದ ಅವರು ನಂದಿಗಿರಿಧಾಮದಲ್ಲಿ ವಿಶ್ರಾಂತಿ ಪಡೆದು, ಸಮೀಪದಲ್ಲೇ ಇದ್ದ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದರು. ಸರ್ ಎಂ ವಿಶ್ವೇಶ್ವರಯ್ಯನವರ ನೆನಪಿಗಾಗಿ 1964ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಗ್ರಂಥಾಲಯ ಮಾಡಿದ್ದರು ಎಂದು ಹೇಳಿದರು.
ಹಾಗೆಯೇ ಇಂದಿರಾ ಗಾಂಧಿ ಅವರು ಎರಡು ಬಾರಿ ಭೇಟಿ ನೀಡಿದ್ದನ್ನು ನಾನು ನೋಡಿದ್ದೇನೆ. ಆದರೆ, ಈ ಪ್ರಧಾನಿ ಮಂತ್ರಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭಯ ಬಿದ್ದು, ಈ ಕಾಂಗ್ರೆಸ್ನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಇದು ಇಡೀ ದೇಶದ ದುರ್ದೈವ ಎಂದು ಟೀಕಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀಟ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ರೋಡ್ ಶೋ ಆಯೋಜನೆ ಮಾಡಿರುವುದು ಸರ್ಕಾರದ ಬೇಜವಾಬ್ದಾರಿ ತೋರಿಸುತ್ತದೆ. ಪ್ರಧಾನ ಮಂತ್ರಿಗಳು, ಅಮಿತ್ ಷಾ ಮತ್ತು ಜೆಪಿ ನಡ್ಡಾ ಅವರು ರಾಜ್ಯಕ್ಕೆ ಪದೇ ಪದೆ ಬರುತ್ತಿರುವುದು ಜನತೆಗೆ ಬೇಸರ ಉಂಟಾಗಿ, ಇದರಿಂದ ಕಾಂಗ್ರೆಸ್ ಇನ್ನಷ್ಟು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು. ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಮಂದಕೃಷ್ಣ ಮಾದಿಗ ರಾಜ್ಯದಲ್ಲಿ ಬಿಜೆಪಿ ಬೆಂಬಲ ನೀಡಿರುವುದು ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಿಂದ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂಬ ಗ್ರಾಮಸ್ಥರ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಲು ಹೋಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬ ಬಗ್ಗೆ ಈಗಾಗಲೇ ಹೇಳಿದ್ದೇನೆ. ಯಾವುದಾದರೂ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮಾಡಬಹುದು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕ ಜನತೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸವದಿ ಸಹೋದರರ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ತನಿಖೆಗೆ ಮನವಿ: ರಮೇಶ್ ಜಾರಕಿಹೊಳಿ