ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ನ ಮೊದಲನೇ ಪಟ್ಟಿಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಅವರಿಗೆ ಫೈನಲ್ ಆಗುತ್ತಿದ್ದಂತೆ ತಾಲೂಕು ಕಾಂಗ್ರೆಸ್ದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಮೊದಲ ಬಾರಿಗೆ ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಅವರು ತಾಲೂಕು ಮುಖಂಡರ ಸಭೆ ಕರೆದು, ಕಾಂಗ್ರೆಸ್ ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ದಾರೆ. ಪ್ರಬಲ ಟಿಕೆಟ್ ಆಕಾಂಕ್ಷಿ ಎ ಸಿ ಶ್ರೀನಿವಾಸ್ ಸಭೆಯಿಂದ ದೂರು ಉಳಿದಿರುವುದು ಭಿನ್ನಮತ ತಣ್ಣಗಾಗಿಲ್ಲ ಎಂಬುದಕ್ಕೆ ಸಾಕ್ಷಿಯಂತಿದೆ.
ಬಂಡಾಯ ತಣ್ಣಗಾಗಿಸಲು ಹರಸಾಹಸ: ಟಿಕೆಟ್ ಘೋಷಣೆ ದಿನದಿಂದ ಪ್ರಚಾರಕ್ಕಿಳಿಯದೇ ಪಕ್ಷದಲ್ಲಿದ್ದ ಬಂಡಾಯ ತಣ್ಣಗಾಗಿಸಲು ಕೆ ಎಚ್ ಮುನಿಯಪ್ಪ ಹರಸಾಹಸ ಪಟ್ಟಿದ್ದರು. ಇನ್ನು ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಬಲ ಆಕಾಂಕ್ಷಿಗಳಾದ ಎ ಸಿ ಶ್ರೀನಿವಾಸ್, ಶಾಂತಕುಮಾರ್, ವೆಂಕಟಸ್ವಾಮಿಗೆ ಸೆಡ್ಡು ಹೊಡೆದು ಕೆ ಎಚ್ ಮುನಿಯಪ್ಪ ಟಿಕೆಟ್ ತಂದಿದ್ದಕ್ಕೆ ಪಕ್ಷದಲ್ಲಿ ಅಪಸ್ವರ ಎದ್ದಿತ್ತು.
ಇದೀಗ ಮೊದಲ ಬಾರಿಗೆ ಕೆ ಎಚ್ ಮುನಿಯಪ್ಪ ಅವರು ತಾಲೂಕು ಮುಖಂಡರ ಸಭೆ ಕರೆದಿದ್ದರು. ಆದ್ರೆ ಪ್ರಬಲ ಟಿಕೆಟ್ ಆಕಾಂಕ್ಷಿ ಎ ಸಿ ಶ್ರೀನಿವಾಸ್ ಸಭೆಯಿಂದ ದೂರು ಉಳಿದು ಗೈರು ಹಾಜರಾಗಿದ್ದಾರೆ. ಎ ಸಿ ಶ್ರೀನಿವಾಸ್ ಹೊರತುಪಡಿಸಿ ಬಹುತೇಕ ನಾಯಕರ ಮನವೊಲಿಕೆಯಲ್ಲಿ ಕೆ ಎಚ್ ಮುನಿಯಪ್ಪ ಮಾಡಿದ ಪ್ಲಾನ್ ಸಕ್ಸಸ್ ಆಗಿದೆ.
ಆದ್ರೆ ಎ ಸಿ ಶ್ರೀನಿವಾಸ್ ಮುಂದಿನ ನಡೆ ನಿಗೂಢವಾಗಿದೆ. ಆದ್ರೆ ಕೆಲವೇ ದಿನಗಳಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸೋದಾಗಿ ಕೆ ಎಚ್ ಮುನಿಯಪ್ಪ ಹೇಳಿಕೆ ನೀಡಿದ್ದಾರೆ. ಆದರೆ ದೇವನಹಳ್ಳಿ ಕಾಂಗ್ರೆಸ್ನಲ್ಲಿ ಬಂಡಾಯದ ಹೊಗೆ ಇನ್ನೂ ನಿಂತಿಲ್ಲ. ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ವೆಂಕಟಸ್ವಾಮಿ ಪಕ್ಷದಿಂದ ಅಧಿಕೃತ ಅಭ್ಯರ್ಥಿ ಕೆ ಎಚ್ ಮುನಿಯಪ್ಪಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುವುದಾಗಿ ಸಭೆಯಲ್ಲಿ ಘೋಷಿಸಿದ್ದಾರೆ.