ಬೆಂಗಳೂರು : ಕೋವಿಡ್ ಪರಿಣಾಮ ಸೀಮಿತ ಅವಧಿಯಲ್ಲಿ ಕೋರ್ಟ್ ಕಲಾಪಗಳ್ನು ನಡೆಸುತ್ತಿರುವ ಸಂದರ್ಭದಲ್ಲಿ ನ್ಯಾಯದಾನವನ್ನು ನಿರಂತರವಾಗಿ ಮುಂದುವರೆಸಲು ಇ-ಲೋಕ್ ಅದಾಲತ್ ವ್ಯವಸ್ಥೆ ಹೆಚ್ಚು ಸೂಕ್ತವಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಎನ್. ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೈಗೊಂಡಿದ್ದ ಮೆಗಾ ಇ-ಲೋಕ್ ಅದಾಲತ್ನಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಒಂದೆಡೆ ಸಮಸ್ಯೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದೆಡೆ ತಂತ್ರಜ್ಞಾನ ಬಳಕೆಯ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಅದರ ಭಾಗವಾಗಿ ಇ-ಲೋಕ್ ಅದಾಲತ್ ಜಾರಿಯಾಗಿದ್ದು, ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ಜನರಿಗೆ ನ್ಯಾಯದಾನ ನೀಡುತ್ತಿರುವುದು ಪ್ರಶಂಸನೀಯ ಎಂದರು. ಅಲ್ಲದೇ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇ-ಲೋಕ್ ಅದಾಲತ್ ಆಯೋಜಿಸಿರುವ ಕ್ರಮ ಇತರೆ ರಾಜ್ಯಗಳಿಗೆ ಮಾದರಿ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಕಾನೂನು ಸೇವಾ ಪ್ರಾಧಿಕಾರ 7.5 ಲಕ್ಷ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿರುವುದು ಗಮನಾರ್ಹ ವಿಷಯ ಎಂದು ನ್ಯಾ. ರಮಣ ಮೆಚ್ಚುಗೆ ವ್ಯಕ್ತಪಡಿಸಿದರು.