ದೇವನಹಳ್ಳಿ (ಬೆಂ.ಗ್ರಾ): ದೇವಸ್ಥಾನದಲ್ಲಿ ಪ್ರಸಾದ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬದ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರಜಾವಿಮೋಚನ ಚಳವಳಿಯಿಂದ ವಿಶ್ವನಾಥಪುರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ.
ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ಆಗಸ್ಟ್ 16ರಂದು ದೇವಸ್ಥಾನದ ಪ್ರಸಾದ ವಿಚಾರಕ್ಕೆ ದಲಿತ ಕುಟುಂಬದವರಾದ ಶಿಕ್ಷಕ ಮುನಿಆಂಜಿನಪ್ಪ, ಪತ್ನಿ ಅರುಣಾ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದಡಿ ಕಿಶೋರ್, ಮಂಜುನಾಥ್ ಮತ್ತು ವೆಂಕಟೇಗೌಡ ಮೇಲೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ರಾಮದಲ್ಲಿ ದಲಿತರಿಗೆ ಭಯದ ವಾತಾವರಣ ಇದೆ, ರಾಜಿ ಮಾಡಿಕೊಳ್ಳುವಂತೆ ಸವರ್ಣೀಯರು ಬೆದರಿಕೆ ಹಾಕುತ್ತಿದ್ದಾರೆ. ಹೊಲಕ್ಕೆ ಹೋಗಲು ದಾರಿ ಬಿಡುವುದಿಲ್ಲವೆಂದು ಹೆದರಿಸುತ್ತಿದ್ದಾರೆ. ದಲಿತರಿಗೆ ರಕ್ಷಣೆ ನೀಡುವ ಮತ್ತು ಧೈರ್ಯ ತುಂಬುವ ಕೆಲಸ ಮಾಡಬೇಕು. ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಆಸ್ತಿಗಾಗಿ ಅಪಘಾತ ಮಾಡಿಸಿ ಹತ್ಯೆ: 6 ವರ್ಷದ ಬಳಿಕ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ