ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿ ಗದ್ದುಗೆ ಮೇಲೆ ಕುಮಾರಸ್ವಾಮಿ ಕಣ್ಣು: ಜೆಡಿಎಸ್ ಅಧಿಕಾರಕ್ಕೆ ತರಲು ಜಾಣ ನಡೆ? - ಒಗ್ಗಟ್ಟಿನ ಮಂತ್ರ ಪಕ್ಷ ಜಪಿಸುತ್ತಿದೆ

ಚಾಮುಂಡೇಶ್ವರಿ ಕ್ಷೇತ್ರದ ಜಿ ಟಿ ದೇವೇಗೌಡ, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡಿನ ಎ ಟಿ ರಾಮಸ್ವಾಮಿ, ಗುಬ್ಬಿಯ ಎಸ್ ಆರ್ ಶ್ರೀನಿವಾಸ್‌, ಕಡೂರಿನ ವೈ ಎಸ್ ವಿ ದತ್ತ ಅವರೆಲ್ಲ ಜೆಡಿಎಸ್ ನಿಂದ ಹೊರಹೋಗಲು ತಯಾರಿ ನಡೆಸಿದ್ದರು. ಕೆಲ ನಾಯಕರಿಗೆ ಆತ್ಮಾಭಿಮಾನದ ಪ್ರಶ್ನೆ ಕಾಡುತ್ತಿತ್ತು.ಆದರೆ ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಪಕ್ಷವೀಗ ಮುಂದಿನ ವಿಧಾನಸಭೆಗೆ ಒಗ್ಗಟ್ಟಿನ ಮಂತ್ರ ಪಕ್ಷ ಜಪಿಸುತ್ತಿದೆ.

JDS party leader HD Kumaraswamy
ಜೆಡಿಎಸ್ ಪಕ್ಷದ ಮುಖಂಡ ಹೆಚ್ ಡಿ ಕುಮಾರಸ್ವಾಮಿ

By

Published : Nov 25, 2022, 2:09 PM IST

ಬೆಂಗಳೂರು: ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದ್ದು ಮತ್ತೆ ಮುಖ್ಯಮಂತ್ರಿ ಆಗಲು ತವಕಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಜಾಣ ಹೆಜ್ಜೆ ಇಡುತ್ತಿದ್ದಾರೆ. 3ನೇ ಬಾರಿಯೂ ಮುಖ್ಯಮಂತ್ರಿ ಆಗುವ ಕನಸು ಹೊತ್ತ ಕುಮಾರಸ್ವಾಮಿಗೆ ಆರಂಭದಲ್ಲಿ ನೆರೆ ರಾಜ್ಯದ ಪ್ರಮುಖ ನಾಯಕರು ಬೂಸ್ಟರ್‌ ಡೋಸ್‌ ಕೊಟ್ಟು ಸಾಥ್ ನೀಡಿದ್ದಾರೆ.

ತೆಲಂಗಾಣದ ಚಂದ್ರಶೇಖರ ರಾವ್‌, ತಮಿಳುನಾಡಿನ ಎಂ ಕೆ ಸ್ಟಾಲಿನ್‌, ಉತ್ತರ ಪ್ರದೇಶದ ಅಖಿಲೇಶ್‌ ಯಾದವ್‌, ಬಿಹಾರದ ನಿತೀಶ್‌ ಕುಮಾರ್‌ ಮತ್ತು ಕೇರಳದ ಪಿಣರಾಯಿ ವಿಜಯನ್ ಅವರು ಹೆಚ್ಡಿಕೆಗೆ ಬೆಂಬಲವಾಗಿ ನಿಂತವರು. ಈ ಪೈಕಿ ಕೆ.ಸಿ.ಚಂದ್ರಶೇಖರರಾವ್ ಗಡಿ ಭಾಗದಲ್ಲಿ ಹೆಚ್ಚು ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಕಲ ಪ್ರೋತ್ಸಾಹ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಅವರು ಈ ವಾಗ್ದಾನ ನೀಡುತ್ತಿದ್ದಂತೆ ಕುಮಾರಸ್ವಾಮಿ ಅವರು ಸುಮಾರು ನೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳಿಗೆ ಬೆಂಗಳೂರಿನಲ್ಲಿ ಪರೀಕ್ಷೆ ಇಟ್ಟುಕೊಂಡು ತರಬೇತಿ ನೀಡುತ್ತಿರುವುದು ಗೊತ್ತಾಗಿದೆ.

ಗೆಲ್ಲುವ ಅಭ್ಯರ್ಥಿಗಳಿಗೆ ಹುಡುಕಾಟ:ಟಿಕೆಟ್‌ ಪಡೆಯುವವರ ಶಕ್ತಿ ಏನು? ದೌರ್ಬಲ್ಯವೇನು? ಅದನ್ನು ಪರಿಹರಿಸಲು ಏನು ಮಾಡಬಹುದು? ಎಷ್ಟೇ ಪ್ರಯತ್ನ ಮಾಡಿದರೂ ಯಾರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ? ಅನ್ನುವುದನ್ನು ಕೆಲ ದಿನಗಳ ಹಿಂದೆ ದೇಶದ ಪ್ರಮುಖ ರಣತಂತ್ರ ನಿಪುಣರು ಪರೀಕ್ಷೆ ಮಾಡಿದ್ದು, ಹೀಗೆ ಪರೀಕ್ಷೆ ನಂತರ ಕುಮಾರಸ್ವಾಮಿ ಅವರಿಗೆ ವರದಿ ನೀಡಿ, ಶಿಬಿರದಲ್ಲಿ ಭಾಗವಹಿಸಿದ್ದ ಟಿಕೆಟ್‌ ಆಕಾಂಕ್ಷಿಗಳ ಪೈಕಿ ಗೆಲ್ಲುವ ಶಕ್ತಿ ಯಾರಿಗಿದೆ? ಇನ್ನಷ್ಟು ಶಕ್ತಿ ತುಂಬಿದರೆ ಗೆಲ್ಲುವವರು ಯಾರು? ಏನೇ ಮಾಡಿದರೂ ಸೋಲುವವರು ಯಾರು? ಎಂಬ ಮಾಹಿತಿ ಒದಗಿಸಲಾಗಿದೆ.

ಸ್ವಯಂಬಲದಿಂದ ಅಧಿಕಾರಕ್ಕೆ ಬರಲು ಪ್ರಯತ್ನ:ಮುಂದಿನ ಚುನಾವಣೆಯಲ್ಲಿ ತಾವು ಸ್ವಯಂಬಲದಿಂದ ಅಧಿಕಾರಕ್ಕೆ ಬರಲು ಟ್ರೈ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಕನಿಷ್ಠ 65 ರಿಂದ 70 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಈ ಮಧ್ಯೆ ಕುಮಾರಸ್ವಾಮಿ ಅವರು ಅನುಸರಿಸುತ್ತಿರುವ ಜಾಣ ನಡೆ ಎಂದರೆ ಈಗ ಜೆಡಿಎಸ್‌ ಪಕ್ಷದಲ್ಲಿದ್ದು ಹೊರಹೋಗಲು ತವಕಿಸುತ್ತಿರುವವರ ಮನವೊಲಿಸುವ ಕೆಲಸಕ್ಕೆ ಇಳಿದಿರುವುದು.

ಜೆಡಿಎಸ್‌ನಲ್ಲಿ ಈಗ ಪರಿಸ್ಥಿತಿ ಉಲ್ಟಾ: ಕೆಲವೇ ತಿಂಗಳ ಹಿಂದೆ ಜೆಡಿಎಸ್‌ ಪಕ್ಷದಲ್ಲಿನ ಬೆಳವಣಿಗೆಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ, ಅರಸೀಕೆರೆಯ ಶಿವಲಿಂಗೇಗೌಡ, ಅರಕಲಗೂಡಿನ ಎ.ಟಿ.ರಾಮಸ್ವಾಮಿ, ಗುಬ್ಬಿಯ ಎಸ್.ಆರ್.ಶ್ರೀನಿವಾಸ್‌, ಕಡೂರಿನ ವೈ.ಎಸ್.ವಿ.ದತ್ತ ಅವರೆಲ್ಲ ಪಕ್ಷದಿಂದ ಹೊರಹೋಗಲು ತಯಾರಿ ನಡೆಸಿದ್ದರು. ಈ ಪೈಕಿ ಜಿ.ಟಿ.ದೇವೇಗೌಡ, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡರಿಗೆ ಆತ್ಮಾಭಿಮಾನದ ಪ್ರಶ್ನೆ ಕಾಡಿತ್ತು. ತಮಗೆ ಪಕ್ಷದಲ್ಲಿ ಗೌರವವಿಲ್ಲ. ಹೀಗಾಗಿ ಅಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ ಎಂಬ ಲೆಕ್ಕಾಚಾರವಿತ್ತು. ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಶಾಸಕ ಜಿ ಟಿ ದೇವೇಗೌಡ: ಅತೃಪ್ತರ ಪೈಕಿ ಜಿ.ಟಿ.ದೇವೇಗೌಡರ ಮನೆಗೆ ಮಾಜಿ ಪ್ರಧಾನಿ ದೇವೇಗೌಡರೇ ಹೋದಾಗ ಪರಿಸ್ಥಿತಿ ಉಲ್ಟಾ ಆಯಿತು. ದೇವೇಗೌಡರನ್ನು ಕಂಡು ಕಣ್ಣೀರು ಹಾಕಿದ ಜಿ.ಟಿ.ದೇವೇಗೌಡರು, ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ.ಕುಮಾರಸ್ವಾಮಿ ಅವರನ್ನು ಮರಳಿ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಗುಬ್ಬಿ ಶಾಸಕ ಶ್ರೀನಿವಾಸ್‌: ಅದೇ ರೀತಿ ಕೆಲ ದಿನಗಳ ಹಿಂದೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರ ಆಪ್ತ ಶಾಸಕ ಸಾ.ರಾ.ಮಹೇಶ್‌ ಅವರು, ಆಗಿದ್ದೆಲ್ಲ ಮರೆತುಬಿಡಿ. ಪಕ್ಷದಲ್ಲೇ ಉಳಿದು ಪುನ: ಮಿನಿಸ್ಟರ್‌ ಆಗಲು ತಯಾರಾಗಿ ಎಂದು ಕುಮಾರಸ್ವಾಮಿ ಸಂದೇಶ ತಲುಪಿಸಿದ್ದಾರೆ. ಫಲಿತಾಂಶ ಏನೇ ಆಗಲಿ,ಆದರೆ ಪ್ರಯತ್ನಿಸದೆ ಇರಬಾರದು ಎಂಬುದು ಕುಮಾರಸ್ವಾಮಿ ಯೋಚನೆ.

ಶಾಸಕ ಎ ಟಿ ರಾಮಸ್ವಾಮಿ:ಇನ್ನುಳಿದಂತೆ ಅರಕಲಗೂಡು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ಜತೆ ಖುದ್ದು ಮಾತನಾಡಿರುವ ಕುಮಾರಸ್ವಾಮಿ ಅವರು, ಈ ಪಕ್ಷದಲ್ಲಿ ನೀವು ಹಿರಿಯರು. ನಿಮಗೆ ಅಗೌರವ ಆಗುವಂಥದ್ದು ಏನೂ ಇಲ್ಲಿ ನಡೆಯುವುದಿಲ್ಲ. ಸರ್ಕಾರ ಇದ್ದಾಗಲೂ ನಿಮಗೆ ಗೌರವ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದಿದ್ದಾರಂತೆ.

ಅರಸೀಕೆರೆಯ ಶಿವಲಿಂಗೇಗೌಡ:ಶಿವಲಿಂಗೇಗೌಡರು ಒಂದು ಸಂದರ್ಭದಲ್ಲಿ ನಾನು 2018 ರಲ್ಲಿ ಮರಳಿ ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಅವರು ತಮ್ಮ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ ಪರಿಣಾಮ ನನಗೆ ಅನುಕೂಲವಾಯಿತು ಎಂದು ತುಂಬಿದ ವಿಧಾನಸಭೆಯಲ್ಲಿ ಹೇಳಿದ್ದರು. ಈ ಮಾತು ಜೆಡಿಎಸ್‌ ನಾಯಕರನ್ನು ಕೆರಳಿಸಿದ್ದಲ್ಲದೆ ಕಾಲಕ್ರಮೇಣ ಶಿವಲಿಂಗೇಗೌಡರು ಆ ಪಕ್ಷದಿಂದ ಹೊರಹೋಗಲು ತಯಾರಿ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇತ್ತೀಚೆಗೆ ಈ ಕುರಿತೂ ಮಾತನಾಡಿದ ಕುಮಾರಸ್ವಾಮಿ, ನೀವು ಸಿದ್ಧರಾಮಯ್ಯ ಅವರನ್ನು ಹೊಗಳಿದ್ದರಲ್ಲಿ ತಪ್ಪೇನೂ ಇಲ್ಲ. ಶಕ್ತಿ ತುಂಬಿದವರಿಗೆ ನಾಲ್ಕು ಒಳ್ಳೆಯ ಮಾತು ಹೇಳಬೇಕು ಶಿವಲಿಂಗಣ್ಣ. ನೀವು ಹೇಳಿದ್ದೀರಿ.ಅದರಲ್ಲಿ ತಪ್ಪೇನಿದೆ? ಅಂತ ಕೇಳಿದರಂತೆ. ಇದಾದ ನಂತರ ಶಿವಲಿಂಗೇಗೌಡರ ಧ್ವನಿ ಬದಲಾಗಿದೆ.

ಕಡೂರಿನ ವೈ ಎಸ್ ವಿ ದತ್ತ: ಇದೇ ರೀತಿ ದಶಕಗಳ ಕಾಲ ಹೆಚ್.ಡಿ.ದೇವೇಗೌಡರ ಬಲಗೈ ಬಂಟರಂತಿದ್ದ ಕಡೂರಿನ ವೈ ಎಸ್ ವಿ ದತ್ತ ಇತ್ತೀಚಿಗೆ ಕಾಂಗ್ರೆಸ್‌ ಕಡೆ ಹೋಗಲು ನಿಶ್ಚಯಿಸಿದ್ದರು. ಆದರೆ ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಭವಿಷ್ಯದ ಮುಖ್ಯಮಂತ್ರಿಗಿರಿಗಾಗಿ ನಡೆಯುತ್ತಿರುವ ಫೈಟು ದತ್ತ ಅವರಿಗೆ ತಲೆನೋವು ತಂದಿದೆ. ದತ್ತ ಅವರು ಸಿದ್ಧರಾಮಯ್ಯ ಮೂಲಕ ಕಾಂಗ್ರೆಸ್‌ ಪ್ರವೇಶ ಬಯಸುತ್ತಿದ್ದರು. ಇದು ಗೊತ್ತಿರುವ ಕಾರಣದಿಂದ ಡಿಕೆಶಿ ಅವರು ದತ್ತ ಅವರಿಗೆ ಅಡ್ಡಗಾಲು ಹಾಕುತ್ತಿದ್ದರು. ಕೈ ಪಾಳೆಯದಲ್ಲಿ ನಡೆಯುತ್ತಿರುವ ಈ ಗೊಂದಲ ಮುಂದೆ ತಮ್ಮ ತಲೆಯ ಮೇಲೆ ಕಲ್ಲು ಹಾಕಬಹುದು ಎಂಬ ಚಿಂತೆಯಲ್ಲಿರುವ ದತ್ತ ಅವರಿಗೆ ಗೌಡರ ಶಿಷ್ಯನಾಗಿರುವುದೇ ಒಳ್ಳೆಯದು ಎಂಬ ಭಾವನೆ ಮೂಡಿಸಿದೆಯಂತೆ. ಅದೇನೇ ಇದ್ದರೂ, ಕುಮಾರಸ್ವಾಮಿ ಅವರ ತಂತ್ರಗಾರಿಕೆ ಜೆಡಿಎಸ್‌ ಪಾಳೆಯದ ಬಿರುಕಿಗೆ ಫೆವಿಕಾಲ್‌ ಹಾಕುತ್ತಿರುವುದಂತೂ ನಿಜ.

ದೇವೇಗೌಡರ ಹಿತವಚನ:ಕುಮಾರಸ್ವಾಮಿ ಅವರಿಗೆ ಇನ್ನೆರಡು ಬಾರಿ ಸಿಎಂ ಆಗುವ ಯೋಗ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಧೈರ್ಯವಾಗಿ ಮುನ್ನುಗ್ಗು ಎಂದು ದೇವೇಗೌಡರು ಹಿತವಚನ ಮಾಡಿದ್ದಾರಂತೆ. ಹೀಗಾಗಿ ಮರಳಿ ಸಿಎಂ ಆಗಲು ತವಕಿಸುತ್ತಿರುವ ಕುಮಾರಸ್ವಾಮಿ ಗಟ್ಟಿಯಾದ ಹೆಜ್ಜೆಗಳನ್ನು ಇಡುತ್ತಿರುವುದು ಮಾತ್ರ ಸತ್ಯ. ರಾಜಕಾರಣದಲ್ಲಿ ಹೀಗೇ ಆಗುತ್ತದೆ ಅಂತ ಹೇಳುವುದು ಕಷ್ಟ. ಆದರೆ ತಂದೆಯ ಈ ಮಾತು ಕುಮಾರಸ್ವಾಮಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೀಗಾಗಿ ಅವರು 2023 ರಲ್ಲಿ ಮರಳಿ ಮುಖ್ಯಮಂತ್ರಿ ಆಗುವ ಕನಸಿನೊಂದಿಗೆ ಚಕ್ರವ್ಯೂಹ ಹೆಣೆಯತೊಡಗಿದ್ದಾರೆ.

ಇದನ್ನೂ ಓದಿ: ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ

ABOUT THE AUTHOR

...view details