ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಕಡಿತ ಘೋರ ಅನ್ಯಾಯ: ಈಶ್ವರ ಖಂಡ್ರೆ - ಟೆಂಡರ್

ಕಲ್ಯಾಣ ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

Ishwar khandre pressnote
ಈಶ್ವರ ಖಂಡ್ರೆ

By

Published : Sep 16, 2020, 10:15 PM IST

ಬೆಂಗಳೂರು: ಕರ್ನಾಟಕದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ತಾರತಮ್ಯ ಧೋರಣೆ ತೋರುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಜೆಟ್ ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಮಂಜೂರಾಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ಹಂಚಿಕೆ ಮಾಡಿದ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಬಂದ, ಕಳೆದ ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್​ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣ 375 ಕೋಟಿ ರೂ. ಇನ್ನೂ ಬಿಡುಗಡೆ ಆಗಿಲ್ಲ. ಇನ್ನು 2020-21 ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದರಲ್ಲಿ 1136.86 ಕೋಟಿ ರೂ. ಕ್ರಿಯಾ ಯೋಜನೆ ಮಾಡಿದ್ದಾರೆ. ಇದರಲ್ಲೂ ಹಣ ಕಡಿತ ಆಗಿದೆ. 2020-21ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಹೇಳಿದ್ದಾರೆ.

ಪ್ಯಾಕೇಜ್ ಏಕೆ ನೀಡುತ್ತಿಲ್ಲ?
ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿಗಳು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಏಕೆ ಇಂಥ ಪ್ಯಾಕೇಜ್ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕ ಜನರು ಕರ್ನಾಟಕದವರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕಲಂ 371 (ಜೆ) ಅನ್ವಯ ಹೈ ಕ ಭಾಗದಲ್ಲಿ ಖಾಲಿಯಿರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಅಂದರೆ 40,000 ಹುದ್ದೆಗಳನ್ನು ಭರ್ತಿ ಮಾಡುವ ನಿರ್ಣಯ ಕೈಗೊಂಡು ನೇಮಕಾತಿ ಪ್ರಕ್ರಿಯೆ ಆರಂಭ ಮಾಡಿತ್ತು. ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿತ್ತು. ಆದರೆ ಬಿಜೆಪಿ ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಸ್ಥಗಿತ ಮಾಡಿದ್ದು , ಇನ್ನು 40 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ವಿಫಲವಾಗಿದೆ.

ಬ್ಯಾಕ್ ಲಾಗ್ ಹುದ್ದೆಗಳನ್ನೂ ತುಂಬಿಲ್ಲ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನು ಖಾಸಗಿ ಅನುದಾನಿತ ಪದವಿ ಕಾಲೇಜಿನಲ್ಲಿ ಮಂಜೂರಾದ ಬೋಧಕ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದೆಲ್ಲವೂ ಹೈ.ಕ. ಭಾಗದ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ, ಈ ಮೂಲಕ ಯುವಜನರ ಭವಿಷ್ಯವನ್ನು ಸರ್ಕಾರ ಕಮರುವಂತೆ ಮಾಡುತ್ತಿದೆ ಎಂದು ದೂರಿದ್ದಾರೆ.

14 ತಿಂಗಳಲ್ಲಿ ಹೊಸ ರಸ್ತೆಯಾಗಲಿ, ನೀರಾವರಿ ಕಾಮಗಾರಿಯಾಗಲಿ, ಹೊಸ ಕಾಲೇಜುಗಳಾಗಲಿ, ವಿವಿಧ ಹುದ್ದೆಗಳ ಭರ್ತಿಯಾಗಲಿ ಯಾವುದೂ ನಡೆಯುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರದಿಂದ ಖೋತಾ
2013 ರಿಂದ 2019-20 ರವರೆಗೆ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ 4803.95 ಕೋಟಿ ಅನುದಾನ ಹೊರತುಪಡಿಸಿ ಬಿಜೆಪಿ ಸರಕಾರ ಬಂದ ಮೇಲೆ ಈವರೆಗೆ ಬಿಡುಗಡೆ ಮಾಡಿದ್ದು, ಕೇವಲ 282.95 ಕೋಟಿ ಮಾತ್ರ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಹಂಚಿಕೆ ಮಾಡಿದ್ದ ಹಣಕ್ಕೂ ಸರ್ಕಾರ ಖೋತಾ ಮಾಡುತ್ತಿದೆ,
ಈ ಹಿಂದೆಲ್ಲಾ ಈ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕುತ್ತಿತ್ತು. ಹೈ.ಕ ಅಭಿವೃದ್ದಿ ಮಂಡಳಿಗೆ ಸಚಿವರೇ ಅಧ್ಯಕ್ಷರಾಗಿರುತ್ತಿದ್ದರು, ಇದರಿಂದ ಅವರು ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಹೆಚ್ಚುವರಿ ಹಣ ನೀಡುವಂತೆ ಮತ್ತು ಈ ಭಾಗದ ಸಮಸ್ಯೆ ಪರಿಹರಿಸಲು ಒತ್ತಾಯಿಸಲು ಸಾಧ್ಯವಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 1 ವರ್ಷದವರೆಗೆ ಅಧ್ಯಕ್ಷರನ್ನೇ ನೇಮಕ ಮಾಡದೆ ಈ ಭಾಗಕ್ಕೆ ಘೋರ ಅನ್ಯಾಯ ಮಾಡಿತ್ತು. ಈಗ ತಿದ್ದುಪಡಿ ಮಾಡಿ ಸಚಿವರಲ್ಲದ ಶಾಸಕರನ್ನು ಮಾಡಿ, ಮಂಡಳಿಯನ್ನು ದುರ್ಬಲಗೊಳಿಸಲಾಗಿದೆ. ಸಂಪುಟದಲ್ಲಿ ಹೈ.ಕ. ಭಾಗದ ಧ್ವನಿಯೇ ಅಡಗಿ ಹೋಗಿದೆ ಎಂದು ಖಂಡ್ರೆ ಆರೋಪಿಸಿದ್ದಾರೆ.
ಕಡೆಗಣನೆ
ಹಿಂದೆ ಹೈ.ಕ.ದ ಐದಾರೂ ಸಚಿವರಿರುತ್ತಿದ್ದರು. ಆದರೆ ಈಗ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿ ಕ್ಷೇತ್ರ ಕಡೆಗಣಿಸಲಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಹಣ ಬಾರದಾಗಿದೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲೂ ಈ ಭಾಗವನ್ನು ಸರ್ಕಾರ ಕಡೆಗಣಿಸಿದೆ. ಕಲ್ಯಾಣ ಕರ್ನಾಟಕದ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಆಕ್ಸಿಜನ್, ಐ.ಸಿ.ಯು. ಬೇಡ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯದ ಕೊರತೆ ಇದೆ. ಇದನ್ನು ಮನಗಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 650 ಹಾಸಿಗೆಗಳನ್ನು ರಾಯಚೂರು, ಕಲಬುರಗಿ ಜಿಲ್ಲಾಡಳಿತಕ್ಕೆ ಕಳಿಸಿದ್ದರು, ಆದರೆ ಸರ್ಕಾರ ಬಡ ರೋಗಿಗಳ ನೆರವಿಗೆ ಇದನ್ನು ಬಳಸದೆ ಪ್ರತಿಷ್ಠೆ ತೋರುತ್ತಾ 450 ಹಾಸಿಗೆಗಳನ್ನು ಪಡೆದುಕೊಳ್ಳಲು ಕಲಬುರಗಿ ಜಿಲ್ಲಾಡಳಿತ ನಿರಾಕರಿಸುವಂತೆ ಮಾಡುವ ಮೂಲಕ ರೋಗಿಗಳಿಗೆ ಅನ್ಯಾಯ ಮಾಡಿದೆ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ದ್ವೇಷದ ರಾಜಕಾರಣವಾಗಿದ್ದು, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದು ಅದರ ಉದ್ಘಾಟನೆಯೂ ಆಗಿದೆ. ಆದರೆ ಕ್ರಿಯಾ ಯೋಜನೆಯಾಗಿಲ್ಲ, ಆ ಸಂಘಕ್ಕೆ ಯಾವುದೇ ರೂಪುರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಈ ಭಾಗಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ವಿಳಂಬವಾಗಿಯಾದರೂ ಸರ್ಕಾರ ಜಾಗೃತಗೊಂಡು ಅಸಮಾನತೆಯಿಂದ ನಲುಗಿರುವ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ, ರೈಲು ಮಾರ್ಗ, ಬಸ್ ನಿಲ್ದಾಣ, ವಸತಿ ನಿಲಯ, ನೀರಾವರಿ ಯೋಜನೆ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿ ಆರಂಭಿಸಬೇಕು, 14 ತಿಂಗಳಲ್ಲಿ ಆಗಿರುವ ನಿರ್ಲಕ್ಷ್ಯ ಸರಿಪಡಿಸಿ, ತಕ್ಷಣವೇ ಅವಶ್ಯಕತೆ ಇರುವ 2000 ಕೋಟಿ ರೂ. ಹಾಗೂ ಹಿಂದಿನ ಸಾಲಿನ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಉಳಿದ ಆರು ತಿಂಗಳಲ್ಲಿ ಅಭಿವೃದ್ಧಿಗೆ ಗಮನ ಹರಿಸಬೇಕು, ಖಾಲಿ ಹುದ್ದೆ ಭರ್ತಿಗೆ ಮತ್ತು ನೈಜವಾಗಿ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ABOUT THE AUTHOR

...view details