ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿ 15 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಹಲವು ವಿಶೇಷತೆಗಳು ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿಮಾನ ನಿಲ್ದಾಣದ ಟರ್ಮಿನಲ್ 2ನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದರು. ಸದ್ಯ ಟರ್ಮಿನಲ್ 2ನಲ್ಲಿ ಕೆಲವೇ ವಿಮಾನಗಳು ಹಾರಾಟ ನಡೆಸುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಏರ್ಪೋರ್ಟ್ನಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.
ಜನವರಿ 15 ರಂದು ಕಾರ್ಯಾರಂಭವಾದ ಟರ್ಮಿನಲ್ 2ನಲ್ಲಿ ದೇಶಿಯ ಮೂರು ವಿಮಾನಯಾನ ಸಂಸ್ಥೆಗಳ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಆದರೆ ಸೆಪ್ಟೆಂಬರ್ 1ರಿಂದ ಅಂತಾರಾಷ್ಟ್ರೀಯ ವಿಮಾನಗಳು ಟಿ 1 (ಟರ್ಮಿನಲ್ 1)ರಿಂದ ಟಿ 2 (ಟರ್ಮಿನಲ್ 2)ಗೆ ಸ್ಥಳಾಂತರವಾಗಲಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ದೇಶಿಯ ವಿಮಾನಗಳು ಟರ್ಮಿನಲ್ 1ರಲ್ಲಿ ಹಾಗೂ ವಿದೇಶ ವಿಮಾನಗಳು ಟರ್ಮಿನಲ್ 2 ರಲ್ಲಿ ಹಾರಾಟ ನಡೆಸಲಿವೆ ಎಂದು ಏರ್ಪೋರ್ಟ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.