ದೊಡ್ಡಬಳ್ಳಾಪುರ : ಘಾಟಿಸುಬ್ರಮಣ್ಯ, ಮಾಕಳಿ ಮತ್ತು ಹುಲುಕುಡಿ ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳಿಂದ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮೋಹನಕುಮಾರಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾಗುವಳಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಿದ್ದಲ್ಲಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ.
ಮಣ್ಣು ಸಾಗಾಣಿಕೆಯಿಂದ ಭೂಕುಸಿತ ಸಾಧ್ಯತೆ :ದೊಡ್ಡಬಳ್ಳಾಪುರ ತಾಲೂಕು ಬಯಲುಸೀಮೆಯ ನಾಡಿನಲ್ಲಿದ್ದರೂ, ನಂದಿಬೆಟ್ಟ, ಘಾಟಿ ಸುಬ್ರಮಣ್ಯ, ಮಾಕಳಿ ಮತ್ತು ಹುಲುಕುಡಿ ಬೆಟ್ಟದ ಸಾಲುಗಳು ಅರೆಮಲೆನಾಡಿನ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ, ಇತ್ತೀಚೆಗೆ ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳು ಕರಗುತ್ತಿವೆ. ಹೆದ್ದಾರಿ ಕಾಮಗಾರಿ ಮತ್ತು ಬೆಂಗಳೂರು ನಗರಕ್ಕೆ ಇಲ್ಲಿನ ದಿಬ್ಬಗಳಿಂದ ಅಕ್ರಮವಾಗಿ ಮಣ್ಣು ಸಾಗಾಣಿಕೆಯಾಗುತ್ತಿದೆ.
ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಇಲ್ಲದೇ ಮಣ್ಣಿನ ದಿಬ್ಬಗಳಿಂದ ಮಣ್ಣು ತೆಗೆದು ಸಾಗಿಸಲಾಗುತ್ತಿದೆ. ಈಗಾಗಲೇ ನಂದಿಬೆಟ್ಟದಲ್ಲಿ ಭೂಕುಸಿತ ಘಟನೆಗಳು ನಡೆದಿದ್ದು, ಇದೇ ರೀತಿ ದಿಬ್ಬಗಳಿಂದ ಮಣ್ಣು ಸಾಗಾಣಿಕೆ ನಡೆದರೆ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸರ್ಕಾರಿ ಜಾಗ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆಗೆ ನಡೆಯುತ್ತಿದೆ. ಅಕ್ರಮ ಮಣ್ಣು ಸಾಗಣಿಕೆಯ ಮಾಹಿತಿ ಬಂದ ಹಿನ್ನೆಲೆ ತಹಶೀಲ್ದಾರ್ ಮೋಹನಕುಮಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.