ದೊಡ್ಡಬಳ್ಳಾಪುರ: ಆಶ್ರಯ ಯೋಜನೆಯಡಿ ಮಂಜೂರು ಮಾಡಲಾಗಿದ್ದ ನಿವೇಶನ ಜಾಗವನ್ನು ಪ್ರಭಾವಿಗಳು ಮಧ್ಯಪ್ರವೇಶಿಸಿ ಗ್ರಾಮ ಪಂಚಾಯಿತಿ ಮೂಲಕ ಅಕ್ರಮ ಖಾತೆ ಮಾಡಿಸಿಕೊಂಡು ತಮ್ಮ ಬೆಂಬಲಿಗರಿಗೆ ನೀಡಿರುವ ಆರೋಪ ಜಿಲ್ಲೆಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರನ್ನು ನೀಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ.
ಅಕ್ರಮ ನಿವೇಶನದಲ್ಲಿ ಮನೆ ನಿರ್ಮಾಣದ ಕುರಿತು ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ ವಿವಾದವೇನು?: 1991ರಲ್ಲಿ ಆಶ್ರಯ ಯೋಜನೆಯಡಿ ಗ್ರಾಮದ 35 ಜನರಿಗೆ ನಿವೇಶನ ಮಂಜೂರು ಮಾಡಲಾಗಿತ್ತು. 40 × 30 ಅಳತೆಯಲ್ಲಿ ನಿವೇಶನದ ಬದಲಿಗೆ 40×25 ಅಳತೆಯ ನಿವೇಶನ ಹಂಚಿಕೆ ಮಾಡಿದ ಪ್ರಭಾವಿಗಳು ಉಳಿದ ಜಾಗವನ್ನು ಹಾಗೆಯೇ ಬಿಟ್ಟುಕೊಂಡಿದ್ದು, 2014ರಲ್ಲಿ ಇದೇ ಜಾಗದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅಕ್ರಮ ಖಾತೆ ಮಾಡಿಕೊಂಡ ಪ್ರಭಾವಿಗಳು ತಮ್ಮ ಬೆಂಬಲಿಗರಿಗೆ ನಿವೇಶನವನ್ನು ಅಕ್ರಮವಾಗಿ ಮಾಡಿಸಿಕೊಟ್ಟಿದ್ದಾರೆ ಅನ್ನೋದು ಆರೋಪ.
ಅಕ್ರಮ ಖಾತೆ ಆರೋಪ: ತಿರುಮಗೊಂಡನಹಳ್ಳಿಯ ಶಿವಕುಮಾರ್ , ಮಂಜುನಾಥ್, ಈರಪ್ಪ, ಮುನಿಕೃಷ್ಣಪ್ಪ, ಮೂರ್ತಿ, ಮುನಿಯಮ್ಮ ಎಂಬುವವರ ಹೆಸರಿಗೆ ಅಕ್ರಮ ಖಾತೆಯಾಗಿವೆ. ಅಕ್ರಮ ನಿವೇಶನದ ವಿರುದ್ದ ಗ್ರಾಮದ ನಂಜೇಗೌಡರು ಮತ್ತು ಗ್ರಾಮಸ್ಥರು ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿ ಅಕ್ರಮ ಖಾತೆಗಳನ್ನು ವಜಾ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಲೂ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ.
1991ರಲ್ಲಿ ಆಶ್ರಯ ಯೋಜನೆಯಡಿ ಹಂಚಿಕೆಯಾದ ನಿವೇಶನದಲ್ಲಿ ಹರೀಶ್ ಎಂಬುವವರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇವರ ಮನೆಗೆ ಅಂಟಿಕೊಂಡಂತೆ ಪ್ಯಾಸೇಜ್ ಸಹ ಬಿಡದೆ ಶಿವಕುಮಾರ್ ಎಂಬುವವರು ಮನೆ ಕಟ್ಟಲು ಮುಂದಾಗಿದ್ದಾರೆ. ಮನೆಗೆ ಗಾಳಿ ಬೆಳಕು ಬರುವುದಿಲ್ಲವೆಂಬ ಕಾರಣಕ್ಕೆ ಹರೀಶ್ ಎರಡು ಅಡಿ ಪ್ಯಾಸೇಜ್ ಬಿಟ್ಟು ಮನೆ ಕಟ್ಟುವಂತೆ ಹೇಳಿದ್ದು, ಇದಕ್ಕೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿರುವ ಶಿವಕುಮಾರ್ ಅಕ್ರಮ ಖಾತೆ ಮಾಡಿಸಿಕೊಂಡು ಆ ಸ್ಥಳದಲ್ಲಿಯೇ ನಿವೇಶನ ಕಟ್ಟಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿಗಳು: ಈಗಾಗಲೇ ನಂಜೇಗೌಡರು ಶಿವಕುಮಾರ್ ವಿರುದ್ಧ ದೂರು ಸಹ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕಾರಣಕ್ಕೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದಿನಾಂಕ 27-05-2021 ರಂದು ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಶಿವಕುಮಾರ್ ರಾತ್ರಿ ಹಗಲು ಮನೆ ಕಟ್ಟುತ್ತಿದ್ದಾರೆ. ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಹಾಡೋನಹಳ್ಳಿ ಪಂಚಾಯಿತಿ ಪಿಡಿಓ ಮತ್ತು ಪೊಲೀಸರಿಗೆ ತಿಳಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ 3ನೇ ಸಂಭಾವ್ಯ ಅಲೆ : ಆರೈಕೆ ಕೇಂದ್ರ ಮುಚ್ಚಬೇಡಿ ಎಂದ ಹೈಕೋರ್ಟ್